ಮತಾಂತರ ನಿಷೇಧ ಕಾಯ್ದೆಗೆ ಭಾರತೀಯ ಕ್ರೈಸ್ತ ಒಕ್ಕೂಟ ವಿರೋಧ : ಬೆಳಗಾವಿಯಲ್ಲಿ ಉಪವಾಸ ಸತ್ಯಾಗ್ರಹ…

69
firstsuddi

ಉಡುಪಿ : ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ತರಾತುರಿಯಿಂದ ಮತಾಂತರ ನಿಷೇಧ ಕಾಯ್ದೆಯನ್ನು ತರಲು ಹೊರಟಿರುವ ಸರ್ಕಾರದ ಕ್ರಮದ ವಿರುದ್ದ ಡಿಸೆಂಬರ್ 17ರಂದು ವಿಕಾಸಸೌಧದ ಎದುರಿನಲ್ಲಿ ಉಪವಾಸ ಸತ್ಯಾಗ್ರಹವನ್ನು ಮಾಡಲಾಗುವುದು ಎಂದು ಭಾರತೀಯ ಕ್ರೈಸ್ತ ಒಕ್ಕೂಟದ ರಾಜ್ಯಾಧ್ಯಕ್ಷ ಪ್ರಶಾಂತ್ ಜತ್ತನ್ನ ಅವರು ಹೇಳಿದರು.

ಜಿಲ್ಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಂಘದ ಅಧ್ಯಕ್ಷ ಪ್ರಶಾಂತ್ ಜತ್ತನ್ನ, ರಾಜ್ಯದಲ್ಲಿ ಬಲವಂತದ ಮತಾಂತರ ಆಗಿದೆ ಎಂಬುದಕ್ಕೆ ರಾಜ್ಯದಲ್ಲಿ ಒಂದೇ ಒಂದು ಸಾಕ್ಷಿ ಪುರಾವೆಗಳು ಇಲ್ಲ. ತರಾತುರಿಯಲ್ಲಿ ಕಾಯ್ದೆಯನ್ನು ಜಾರಿಗೆ ತರುವ ಹಿಂದೆ ಷಡ್ಯಂತ್ರ ಇದೆ. ಕ್ರೈಸ್ತ ಸಮುದಾಯವನ್ನು ದಮನಿಸಲು ರಾಜಕೀಯ ಪ್ರೇರಿತವಾಗಿ ಈ ಕಾಯ್ದೆಯನ್ನು ಜಾರಿಗೆ ತರಲಾಗುತ್ತಿದೆ. ಈಗಾಗಿರುವ ಮತಾಂತರಗಳು ಸ್ವಇಚ್ಛೆಯಿಂದ ಹೊರತು ಬಲವಂತ ಮತಾಂತರ ಅಲ್ಲ. ಭಾರತೀಯ ಕ್ರೈಸ್ತ ಒಕ್ಕೂಟ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಸಾಂಕೇತಿಕವಾಗಿ ಒಂದು ದಿನ ಪ್ರತಿಭಟನೆ ಮಾಡುತ್ತೇವೆ ಎಂದರು.

ರಾಜ್ಯದ ಮುಖ್ಯಮಂತ್ರಿ ಮತಾಂತರ ಕಾಯ್ದೆಗೆ ಹಿಂದೂ ಸಮಾಜದ ಬೆಂಬಲ ಇದೆ ಎಂಬುದಾಗಿ ಹೇಳಿದ್ದಾರೆ ಆದರೆ ನಮಗೆ ತಿಳಿದ ಮಟ್ಟಿಗೆ ಹಿಂದೂ ಸಮಾಜದ ಎಲ್ಲರೂ ಈ ಕಾಯ್ದೆಯನ್ನು ಒಪ್ಪುವುದಿಲ್ಲ ಯಾಕೆಂದರೆ ಸಮಾಜದಲ್ಲಿ ತಾನು ಏನು ತಿನ್ನಬೇಕು ತಾನು ಯಾವ ದೇವರನ್ನು ಪೂಜಿಸಬೇಕು ಎಂಬ ಸ್ವಾತಂತ್ರ್ಯ ಇದೆ ಎಂದು ನಂಬುವ ಅನೇಕ ಹಿಂದೂ ಸಮಾಜದ ಜನರಿದ್ದಾರೆ. ಕ್ರೈಸ್ತರಾದ ನಾವು ಬಲವಂತ ಆಮಿಷದ ಮತಾಂತರವನ್ನು ವಿರೋಧಿಸುತ್ತೇವೆ. ಈ ರೀತಿ ಯಾರಾದರೂ ತಮ್ಮ ಮನೆಗಳಲ್ಲಿ ಚರ್ಚುಗಳಲ್ಲಿ ಪ್ರಾರ್ಥನಾ ಸ್ಥಳಗಳಲ್ಲಿ ಬಲವಂತ ಅಮಿಷದ ಮತಾಂತರ ಮಾಡಿದ್ದಲ್ಲಿ ನಾವು ಕ್ರೈಸ್ತ ಒಕ್ಕೂಟ ಅವರ ವಿರುದ್ಧವಾಗಿ ದೂರು ದಾಖಲಿಸಲು ಮತ್ತು ಅಂತ ಸ್ಥಳವನ್ನು ಮುಚ್ಚಲು ಬದ್ಧರಾಗಿದ್ದೇವೆ ಎಂದು ಹೇಳಿದರು.