ಮದ್ವೆ ಕಾರ್ಡ್‌ನಲ್ಲಿ ಪಕ್ಷದ ಪ್ರಣಾಳಿಕೆ ಮುದ್ರಿಸಿದ ಪವನ್ ಕಲ್ಯಾಣ್ ಬೆಂಬಲಿಗ…

43
firstsuddi

ಹೈದರಾಬಾದ್: ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಲವು ಪಕ್ಷಗಳು ವಿಭಿನ್ನ ರೀತಿಯಲ್ಲಿ ತಮ್ಮ ಪಕ್ಷದ ಬಗ್ಗೆ ಹಾಗೂ ಕೆಲಸ, ಭರವಸೆ ಪ್ರಚಾರ ಮಾಡಲು ಕೆಲಸ ಮಾಡುತ್ತಿದೆ. ಇದೇ ರೀತಿಯಲ್ಲಿ ಆಂಧ್ರಪ್ರದೇಶದಲ್ಲಿ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷದ ಬೆಂಬಲಿಗರೊಬ್ಬರು ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಪಕ್ಷದ ಪ್ರಣಾಳಿಕೆಯನ್ನು ಮುದ್ರಣ ಮಾಡಿದ್ದಾರೆ. ಇದೀಗ ಈ ವೀಡಿಯೋ ಎಲ್ಲ ಕಡೆ ವೈರಲ್ ಆಗಿದೆ.

ಆಂಧ್ರಪ್ರದೇಶದ ಕಾಕಿನಾಡ ನಿವಾಸಿಯೊಬ್ಬರ ಮದುವೆ ಕಾರ್ಡ್‌ನಲ್ಲಿ ಜನಸೇನಾ ಪಕ್ಷದ ಪ್ರಣಾಳಿಕೆಯನ್ನು ಮುದ್ರಿಸಲಾಗಿದೆ. ವ್ಯಕ್ತಿ ಪಕ್ಷದ ನಾಯಕ ಪವನ್ ಕಲ್ಯಾಣ್ ಅವರ ಬೆಂಬಲಿಗರಾಗಿದ್ದು, ಪಿಠಾಪುರಂನಲ್ಲಿ ಪವನ್ ಕಲ್ಯಾಣ್ ಅವರಿಗೆ ಮತ ನೀಡುವಂತೆ ಆಹ್ವಾನಿತರನ್ನು ಒತ್ತಾಯಿಸಿದ್ದಾರೆ.

ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ವ್ಯಕ್ತಿ ಜನರಿಗೆ ಮದುವೆ ಕಾರ್ಡ್‌ಗಳನ್ನು ವಿತರಿಸುತ್ತಿರುವುದನ್ನು ಕಾಣಬಹುದಾಗಿದೆ.

ತೆಲುಗು ಸೂಪರ್ ಸ್ಟಾರ್ ಪವನ್ ಕಲ್ಯಾಣ್ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದು, ಜನಸೇನಾ ಪಕ್ಷವನ್ನೂ ಕಟ್ಟಿದ್ದಾರೆ. ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಅವರ ಪಕ್ಷವು ಎನ್‌ಡಿಎ ಮೈತ್ರಿಕೂಟದ ಭಾಗವಾಗಿತ್ತು. ಇದೀಗ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ-ಟಿಡಿಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸುತ್ತಿದ್ದಾರೆ.