ಮಧುಮಂಚದ ಕನಸು ಕಾಣುವ ಯುವಜೋಡಿಗಳಿಗೆ ಆಷಾಡದ ಕಾರ್ಮೋಡ…

1013
firstsuddi

ಮುಂಗಾರು ಪ್ರಾರಂಭವಾಗಿ ಆಗಸದಲ್ಲಿ ಆಷಾಢದ ಕಾರ್ಮೋಡಗಳು ಆವರಿಸಿಕೊಳ್ಳಲು ಪ್ರಾರಂಭಿಸುತ್ತಿದ್ದಂತೆ ಹೊಸದಾಗಿ ಮದುವೆಯಾಗಿ ಮಧುಮಂಚದ ಕನಸು ಕಾಣುವ ಯುವಜೋಡಿಗಳಲ್ಲಿಯೂ ವಿರಹದ ಕಾರ್ಮೋಡಗಳು ಆವರಿಸಿಕೊಳ್ಳಲು ಆರಂಭಿಸುತ್ತವೆ. ವಿರಹ ನೂರು ನೂರು ತರಹ. ಅವರ ಸರಸ ಸಲ್ಲಾಪಗಳಿಗೆ ಈ ತಿಂಗಳ ಮಟ್ಟಿಗೆ ತಾತ್ಕಾಲಿಕ ಬ್ರೇಕ್. ಗರಿಬಿಚ್ಚಿ ಹಾರಾಡಬೇಕಾದ ಜೋಡಿ ಹಕ್ಕಿಗಳಿಗೆ ರೆಕ್ಕೆ ಮುರಿದು ಬಂಧಿಸಿದ ಅನುಭವ.

ಆಷಾಢ ಮಾಸವೆಂದರೆ ಹಾಗೆ, ಅಲ್ಲಿ ಅಗಲಿಕೆಯ ಛಾಯೆ ನವಜೋಡಿಯ ಮನದಲ್ಲಿ ಕಾಡುತ್ತಿರುತ್ತೆ. ಗಂಡ-ಹೆಂಡತಿ, ಅತ್ತೆ-ಸೊಸೆ ಈ ತಿಂಗಳಲ್ಲಿ ಒಟ್ಟಿಗೆ ಇರಬಾರದು ಎಂಬ ನಾನಾ ನಂಬಿಕೆಗಳಿವೆ. ಕೆಲವರು ಪಾಲಿಸುತ್ತಾರೆ, ಹಲವರು ಮೂರೇ ದಿನದಲ್ಲಿ ಒಂದಾಗಿರುತ್ತಾರೆ. ವಿರಹ ವೇದನೆ ನರಕ ಯಾತನೆ. ಇವೆಲ್ಲ ಅವಿವೇಕ, ಗೊಡ್ಡು ಸಂಪ್ರದಾಯ ಅಂತ ಜರಿಯುವವರೂ ಈ ಆಚರಣೆಯ ಹಿಂದಿನ ವೈಜ್ಞಾನಿಕ ಕಾರಣ ತಿಳಿದುಕೊಂಡರೆ ನಮ್ಮ ಹಿರಿಯರ ಕಾಳಜಿ ಖಂಡಿತ ಅರ್ಥವಾಗುತ್ತೆ.

ಪುರಾತನ ಆಯುರ್ವೇದ ಪದ್ಧತಿ ಪ್ರಕಾರ ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಗಂಡ ಹೆಂಡಿರ ಲೈಂಗಿಕ ಕ್ರಿಯೆ ನಿಷೇಧ. ಈ ತಿಂಗಳು ಅಶುಭ ತಿಂಗಳೆಂದು ಪರಿಗಣಿಸಿರುವ ಕಾರಣ ಇದು ಗಂಡ ಹೆಂಡತಿ ಕೂಡಲು ಸೂಕ್ತ ಕಾಲವಲ್ಲ. ಅದರಲ್ಲೂ ಹೊಸ ಬದುಕಿಗೆ ನಾಂದಿ ಹಾಡಬೇಕಾದ ನವ ವಧುವರರಿಗೆ ಇದು ಅಶುಭ ಎಂಬ ನಂಬಿಕೆ. ಆದ್ದರಿಂದ ತಿಂಗಳು ಆರಂಭಗೊಳ್ಳುವ ಮುನ್ನವೇ ವಧು ತನ್ನ ತವರು ಮನೆಯ ಕಡೆಗೆ ಮುಖ ಮಾಡುವುದು ವಾಡಿಕೆ.

ಈ ಆಧುನಿಕ ಜೀವನದಲ್ಲಿ ತಲೆತಲಾಂತರದಿಂದ ಬಂದಿರುವ ಈ ಆಚರಣೆಯನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಕಷ್ಟಕರವೆಂಬುವುದು ನಮಗೂ ತಿಳಿದಿದೆ. ಮುದ್ದಿನ ಮಡದಿಯನ್ನು ತಿಂಗಳಿರಲಿ ಮೂರು ದಿನ ಕೂಡ ಆಕೆಯ ತವರು ಮನೆಗೆ ಕಳಿಸಬೇಕೆಂದಾಗ ‘ಸೋ ಮಿಸ್ ಯು ಕಣೆ’ ಅಂತ ಗಂಡನಿಗೂ ಕಣ್ಣೀರು ಒತ್ತರಿಸಿ ಬಂದಿರುತ್ತದೆ. ಹೆಂಡತಿ ಕೂಡ ತವರು ಮನೆ ಬಿಟ್ಟು ಬರುವಾಗ ಆದಷ್ಟೇ ದುಃಖವಾಗಿರುತ್ತದೆ. ಏನು ಮಾಡೋದು ಪಾಲಿಸಲೇಬೇಕಲ್ಲ? ಆಷಾಢದ ಅಗಲುವಿಕೆಯ ಹಿಂದಿನ ಕಾರಣಗಳನ್ನು ತಿಳಿದುಕೊಂಡರೆ ನೀವೂ ಖಂಡಿತ ಒಪ್ಪುತ್ತೀರಿ. ಲೈಂಗಿಕತೆ ಏಕೆ ನಿಶಿದ್ಧ ಎಂಬುದಕ್ಕೆ ನಾಲ್ಕು ಕಾರಣಗಳನ್ನು ನೀಡಲಾಗಿದೆ. ಒಂದೊಂದಾಗಿ ಓದುತ್ತ ಸಾಗಿರಿ.

ಮಳೆಗಾಲ ಆರಂಭವಾದ ಮೇಲೆ ಎರಡು ತಿಂಗಳುಗಳನ್ನು ಅತ್ಯಂತ ದುರ್ಬಲ ತಿಂಗಳುಗಳೆಂದು ಪರಿಗಣಿಸಲಾಗುತ್ತದೆ. ನಿರಂತರ ಸುರಿಯುವ ಈ ಮಳೆಯಿಂದಾಗಿ ಹವಾಮಾನದಲ್ಲಾಗುವ ಬದಲಾವಣೆಗಳಿಂದ ಹಲವು ಕಾಯಿಲೆಗಳು ಹಬ್ಬುವ ಅವಕಾಶಗಳು ಹೆಚ್ಚು. ಅಷ್ಟೇ ಅಲ್ಲ, ಈ ದಿನಗಳಲ್ಲಿ ನೀರು ಮತ್ತು ಗಾಳಿ ಮೂಲಕ ಕಾಯಿಲೆ ಅತಿ ಬೇಗ ಹರಡುತ್ತದೆ.

ಅಯ್ಯೋ, ಚಳಿ ಮಳೆ ಗಾಳಿ ಸುಯ್ಯನೆ ಬೀಸುತ್ತಿರುವ ದಿನಗಳಲ್ಲಿ ಮುದ್ದಿನ ಹೆಂಡತಿಯ ಬೆಚ್ಚನೆಯ ಅಪ್ಪುಗೆಯನ್ನು ಮಿಸ್ ಯಾರಾದರೂ ಮಾಡಿಕೊಳ್ಳುತ್ತಾರಾ? ಅಂತ ನೀವು ಅನ್ನಬಹುದು. ಆದರೆ, ಆಯುರ್ವೇದ ಏನು ಹೇಳುತ್ತದೆಂದರೆ, ಈ ದಿನಗಳಲ್ಲಿ ಮಿಲನ ಮಹೋತ್ಸವ ಆಚರಿಸಿಕೊಂಡರೆ ಹುಟ್ಟುವ ಮಕ್ಕಳಲ್ಲಿ ಅಂಗವೈಕಲ್ಯತೆ ಬರಬಹುದು. ದುಡುಕಿ ಪಶ್ಚಾತ್ತಾಪ ಪಡುವುದಕ್ಕಿಂತ ದೂರವಿರುವುದೇ ಲೇಸಲ್ಲವೆ?

 

ಇದೇ ಕಾರಣಕ್ಕೆ ಆಷಾಢ ತಿಂಗಳಿನಲ್ಲಿ ಯಾವುದೇ ಮದುವೆ, ಮುಂಜಿ, ಮತ್ತಿತರ ಶುಭ ಸಮಾರಂಭಗಳನ್ನು ಆಯೋಜಿಸುವುದಿಲ್ಲ. ಆಷಾಢದ ಕಾರ್ಮೋಡಗಳು ಕರಗಿ, ಭೀಮನ ಅಮವಾಸ್ಯೆಯ ನಂತರ ಶ್ರಾವಣ ಕಾಲಿಡುತ್ತಿದ್ದಂತೆ ಮನೆಗೆ ಅಕ್ಕರೆಯ ಹೆಂಡತಿ ಮರಳಿ ಸಂಭ್ರಮದ ಮೇರೆ ಮೀರಿರುತ್ತದೆ. ಅತ್ತೆ ಮನೆಯಿಂದ ಮರಳಿಬಂದ ಮಡದಿಯನ್ನು ಕೂಡಲು ಗಂಡ ಗುಡುಗುಡು ಚಟಪಡಿಸುತ್ತಿರುತ್ತಾನೆ. ಮಳೆಹನಿಯಂಥ ಮಡದಿ ಸೂರ್ಯರಶ್ಮಿಯನ್ನು ಸೇರಲು ತವಕಿಸುತ್ತಿರುತ್ತಾಳೆ. ಕಾಮನಬಿಲ್ಲು ಹದೆಯೇರಿರುತ್ತದೆ.

ಧೋಧೋ ಮಳೆಹುಯ್ದು ಅಣೆಕಟ್ಟೆ ತುಂಬಿ, ಕ್ರೆಸ್ಟ್ ಗೇಟ್ ಗಳನ್ನು ಬಿಟ್ಟಕೂಡಲೆ ಭೋರ್ಗರೆಯುವ ಆ ಜಲರಾಶಿಯಂತೆ ಪ್ರೀತಿ ಭೋರ್ಗರೆದಿರುತ್ತದೆ. ಲಾಸ್ಯವಾಡುತ್ತ ಮೈದುಂಬಿ ಹರಿಯುವ ನದಿಯಂತೆ ಪ್ರೀತಿ ನರ್ತನವಾಡಿರುತ್ತದೆ.