ನವದೆಹಲಿ : ದೆಹಲಿ ಅಬಕಾರಿ ನೀತಿಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ) ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಮನೆ ಮೇಲೆ ದಾಳಿ ನಡೆಸಿದ ಕೆಲವೇ ಗಂಟೆಗಳ ಬಳಿಕ 12 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
ತಕ್ಷಣದಿಂದ ಜಾರಿಗೆ ಬರುವಂತೆ 12 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಆದೇಶ ಹೊರಡಿಸಿದ್ದಾರೆ. ಜಿತೇಂದ್ರ ನಾರಾಯಣ್, ಶುರ್ಬೀರ್ ಸಿಂಗ್, ಗರಿಮಾ ಗುಪ್ತಾ, ಮಾಧೋರಾವ್ ಮೋರ್, ಅನಿಲ್ ಕುಮಾರ್ ಸಿಂಗ್, ವಿವೇಕ್ ಪಾಂಡೆ, ಉದಿತ್ ಪ್ರಕಾಶ್ ರೈ, ಕಲ್ಯಾಣ್ ಸಹಾಯ್ ಮೀನಾ, ಸೋನಾಲ್ ಸ್ವರೂಪ, ವಿಜೇಂದ್ರ ಸಿಂಗ್ ರಾವತ್, ಕ್ರಿಶನ್ ಕುಮಾರ್, ಮತ್ತು ಹೇಮಂತ್ ಕುಮಾರ್ ವರ್ಗಾವಣೆಗೊಂಡ 12 ಅಧಿಕಾರಿಗಳು.
ಹೊಸ ಅಬಕಾರಿ ನೀತಿ ಪ್ರಕರಣದಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ನಿನ್ನೆ ದೆಹಲಿ ಉಪ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ ಅವರ ಮನೆ ಸೇರಿದಂತೆ ರಾಷ್ಟ್ರ ರಾಜಧಾನಿಯ 22 ಸ್ಥಳಗಳಲ್ಲಿ ಸಿಬಿಐ ದಾಳಿ ನಡೆಸಿತ್ತು. ಇದರ ಬೆನ್ನಲ್ಲೇ ಈ ನಿರ್ದೇಶನ ನೀಡಲಾಗಿದೆ.










