ನವದೆಹಲಿ : ಅಬಕಾರಿ ನೀತಿ ಪ್ರಕರಣದಲ್ಲಿ ಬಂಧಿತರಾಗಿರುವ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಕಸ್ಟಡಿಯನ್ನು ಮತ್ತೆ ಎರಡು ದಿನ ವಿಸ್ತರಣೆ ಮಾಡಿ ಸಿಬಿಐ ವಿಶೇಷ ನ್ಯಾಯಲಯ ಆದೇಶಿಸಿದೆ.
ಐದು ದಿನಗಳ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಅವರನ್ನು ಇಂದು ರೋಸ್ ಅವೆನ್ಯೂ ಕೋರ್ಟ್ ಕಾಂಪ್ಲೆಕ್ಸ್ ನಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಸಿಬಿಐ ಪರ ವಾದ ಮಂಡಿಸಿದ ವಕೀಲರು, ಸಿಸೋಡಿಯಾ ವಿಚಾರಣೆಗೆ ಸಹಕಾರ ನೀಡುತ್ತಿಲ್ಲ. ಹೀಗಾಗಿ ಇನ್ನೂ ಮೂರು ದಿನ ಅವರನ್ನು ಕಸ್ಟಡಿಗೆ ನೀಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿವಾದ ಮಂಡಿಸಿದ ಮನೀಶ್ ಸಿಸೋಡಿಯಾ ಪರ ವಕೀಲರು, ಈಗಾಗಲೇ ನಾವು ಜಾಮೀನು ಅರ್ಜಿ ಸಲ್ಲಿಸಿದ್ದೇವೆ. ಅದರ ವಿಚಾರಣೆ ನಡೆಯಬೇಕು. ನಿತ್ಯ 8-9 ಗಂಟೆಗಳ ವಿಚಾರಣೆಯಲ್ಲಿ ಕೇಳಿದ ಪ್ರಶ್ನೆಗಳನ್ನೇ ಮತ್ತೆ ಮತ್ತೆ ಕೇಳಿ ಮಾನಸಿಕ ಹಿಂಸೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ವಾದ ಪ್ರತಿವಾದ ಆಲಿಸಿದ ನ್ಯಾ. ಎಂ.ಕೆ.ನಾಗಪಾಲ್, ಎರಡು ದಿನಗಳ ಕಸ್ಟಡಿಯನ್ನು ವಿಸ್ತರಿಸಿ, ಜಾಮೀನು ಅರ್ಜಿಯ ವಿಚಾರಣೆಯನ್ನು ಮಾರ್ಚ್ 10ರಂದು ನಡೆಸುವುದಾಗಿ ಆದೇಶಿಸಿದರು.










