ಮರಿಯಮ್ಮನಹಳ್ಳಿ,: ಕಲೆ ಇಲ್ಲದೇ ಜೀವನವಿಲ್ಲ, ಕಲೆಯೇ ಜೀವನ. ನಮ್ಮೂರಲ್ಲೇ ನನ್ನ ಕಲೆಗೆ ಅದ್ದೂರಿ ಅಭಿನಂದನೆಯ ಗೌರವವನ್ನು ಸ್ವೀಕರಿಸಿದ್ದು, ಈಗಾಗಲೇ ರಾಷ್ಟ್ರಪತಿಗಳ ಕೈಯಿಂದಲೇ ಪ್ರಶಸ್ತಿ ಪಡೆದಷ್ಟು ಸಂತಸವಾಗಿದೆ ಎಂದು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಮಾತಾ ಮಂಜಮ್ಮ ಜೋಗ್ತಿ ಅಭಿಪ್ರಾಯಪಟ್ಟರು.
ಅವರು ಮರಿಯಮ್ಮನಹಳ್ಳಿಯ ಎಸ್‌ಎಲ್‌ಎನ್‌ಎ ಶಿಕ್ಷಣ ಸಂಸ್ಥೆಯ ಸಮೂಹ ಶಾಲಾ ಕಾಲೇಜುಗಳ ಸಂಯುಕ್ತಾಶ್ರದಲ್ಲಿ ಮಂಗಳವಾರ ವಿನಾಯಕ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ದೇವಸ್ಥಾನದಲ್ಲಿ ಮಲಗಿ ಜೀವನ ಸಾಗಿಸುವ, ವಾರ ಹಾಗೂ ದಿನಗಳ ಪ್ರಕಾರವಾಗಿ ಸಂತೆಯಲ್ಲಿ ಕುಣಿದ, ಜಾತ್ರೆಗಳಲ್ಲಿ ಹಾಗೂ ಹಬ್ಬಗಳಲ್ಲಿ ಕುಣಿದು ಜನರ ಮನರಂಜಿಸಿ ಭಿಕ್ಷಾಟನೆ ಮಾಡಿದ, ಹೊಲಗಳಲ್ಲಿ ಕುಣಿದು ರೈತರನ್ನು ರಂಜಿಸಿ ಜೀವನ ಹೊರೆಯುತ್ತಿದ್ದ ನನಗೆ ಇಂದು ಪದ್ಮಶ್ರೀ ಪ್ರಶಸ್ತಿ ದೊರಕಿರುವುದು ಬಹಳ ಸಂತಸ ತಂದಿದೆ. ಇದರಿಂದಾಗಿ ನನ್ನ ಜನ್ಮ ಸಾರ್ಥಕವಾಯಿತು ಎಂದು ಪ್ರಶಸ್ತಿ ನೀಡಿ ಗೌರವಿಸಿದ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿದ್ದ ಮಕ್ಕಳನ್ನುದ್ಧೇಶಿಸಿ ಗುರುಗಳಿಗೆ ಎದುರು ಮಾತನಾಡದೇ, ತಂದೆ ತಾಯಿ ಮಾತನ್ನು ನೋಯಿಸದೇ ಗುರುಗಳ ಮಾರ್ಗದರ್ಶನದಂತೆ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಸಲಹೆ ಮಾಡಿದರು. ಜೋಗ್ತಿ ಕಲೆ ಕಲಿತ ವಿಚಾರವನ್ನು ಮಕ್ಕಳಿಗೆ ವಿವರಿಸಿ, ನಾವೆಲ್ಲರೂ ಕಲೆಯಲ್ಲಿಯೇ ಹುಟ್ಟಿ, ಕಲೆಯಲ್ಲಿಯೇ ಬೆಳೆದು ಕಲೆಯಲ್ಲಿಯೇ ಸಾವನ್ನಪ್ಪುತ್ತೇವೆ ಎಂದು ಹಲವು ಉದಾಹರಣೆಗಳ ಮೂಲಕ ವಿವರಿಸಿದರು. ಪ್ರಸ್ತುತ ಎಲ್ಲಾ ಕಲೆಯನ್ನು ಸರ್ಕಾರವು ವಿದ್ಯಾರ್ಥಿ ವೇತನ ನೀಡಿ ಕಲಿಸುತ್ತಿದೆ. ಅದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಲಹೆ ಮಾಡಿದರು.
ಕಾರ್ಯಕ್ರಮದಲ್ಲಿ ಸಂಡೂರು ಸಿಪಿಐ ಉಮೇಶ್ ಮಾತನಾಡಿ, ಯಾವುದೇ ಕಲೆಗೆ ಒಂದಲ್ಲ ಒಂದು ದಿನ ಮನ್ನಣೆ ದೊರೆಯುತ್ತದೆ ಎನ್ನುವುದಕ್ಕೆ ಮಾತಾ ಮಂಜಮ್ಮ ಜೋಗ್ತಿಯವರಿಗೆ ಬಂದ ಪದ್ಮಶ್ರೀ ಪ್ರಶಸ್ತಿಯೇ ಒಂದು ಉದಾಹರಣೆಯಾಗಿದೆ. ಮಂಜಮ್ಮರ ಪರಿಶ್ರಮದ ಜೀವನವನ್ನು ಆದರ್ಶವಾಗಿಟ್ಟುಕೊಂಡು ಮಕ್ಕಳು ಕೂಡ ತಮ್ಮಲ್ಲಿನ ಕಲೆಯನ್ನು ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿ.ವಿ.ಯ ವಸ್ತು ಸಂಗ್ರಹಾಲಯ ಹಾಗೂ ಪ್ರವಾಸೋದ್ಯಮ ಸಂಶೋಧನಾ ಕೆಂದ್ರದ ನಿರ್ದೇಶಕ ಡಾ. ವಾಸುದೇವ ಬಡಿಗೇರ್, ಹರಟೆ ಕಾರ್ಯಕ್ರಮದ ಹಾಸ್ಯ ಪ್ರವಚನ ಗಾರ್ತಿ ಇಂದುಮತಿ ಸಾಲಿಮಠ, ಕನ್ನಡ ವಿ.ವಿ.ಯ ಮಹಿಳಾ ಅಧ್ಯಯನ ವಿಭಾಗದ ಡಾ. ಶಿವಾನಂದ ವಿರಕ್ತ ಮಠ, ಪಟ್ಟಣದ ಪಿಎಸ್‌ಐ ಎಂ ಶಿವಕುಮಾರ್‌ರು ಉಪಸ್ಥಿತರಿದ್ದು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಎಲ್‌ಎನ್‌ಎ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್. ಸತ್ಯನಾರಾಯಣ ಅಧ್ಯಕ್ಷತೆಯನ್ನುವಹಿಸಿದ್ದರು.
ವೇದಿಕೆ ಕಾರ್ಯಕ್ರಮದ ನಂತರ ಹರಟೆ ಕಾರ್ಯಕ್ರಮದ ಹಾಸ್ಯ ಪ್ರವಚನ ಗಾರ್ತಿ ಇಂದುಮತಿ ಸಾಲಿಮಠರು ನೆರದಿದ್ದ ಜನರನ್ನು ತಮ್ಮ ಹಾಸ್ಯ ಮೋಡಿಯ ಮೂಲಕ ನಗೆಯ ಹೊನಲಲ್ಲಿ ತೇಲಿಸಿದರು. ಕಾರ್ಯಕ್ರಮಕ್ಕೂ ಮುನ್ನ ಶಾಲಾ ಮಕ್ಕಳಿಂದ ಮನರಂಜನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಸೋಮೇಶ್ ಉಪ್ಪಾರ್ ನಿರ್ವಹಿಸಿದರು. ಮುಖ್ಯಗುರು ಭೀಮನಾಯ್ಕ್ ಸ್ವಾಗತಿಸಿ, ಶಿಕ್ಷಕಿ ಶ್ರೀ ಲಕ್ಷ್ಮಿ ವಂದಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕೆ. ಮಂಜುನಾಥ, ಪ್ರಾಚಾರ್ಯ ಎಂ. ಅಶೋಕ, ಮು.ಗು. ಡಿ.ಯಮನೂರಪ್ಪ, ಪಾಟೀಲ್ ಹಾಗೂ ಇತರರು ಇದ್ದರು.










