ಮರಿಯಮ್ಮನಹಳ್ಳಿ : ಶಿಸ್ತು, ದೃಢ ಸಂಕಲ್ಪ ಹಾಗೂ ದೈಹಿಕ ಆರೋಗ್ಯವನ್ನು ಕರಾಟೆಯಂತಹ ಮಾರ್ಷಲ್ ಆರ್ಟ್ಸ್ ಕಲೆ ಕಲಿಸಿಕೊಡುತ್ತದೆ ಎಂದು ಹಗರಿಬೊಮ್ಮನಹಳ್ಳಿಯ ಗ್ಲೋಬಲ್ ಎಜುಕೇಷನ್ ಟ್ರಸ್ಟ್ ನ ಅಧ್ಯಕ್ಷ ಹಫೀಜ್ ಶೇಖ್ ಹೇಳಿದರು. ಅವರು ಪಟ್ಟಣದ ಜೈನಮಂದಿರದಲ್ಲಿ ಮರಿಯಮ್ಮನಹಳ್ಳಿಯ ಫುನಕೋಷಿ ಶೋಟೋಕನ್ ಕರಾಟೆಯವರು ಹಮ್ಮಿಕೊಂಡಿದ್ದ ಒಂದು ದಿನದ ಕರಾಟೆ ಕುಮಿಟೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕರಾಟೆಯಿಂದ ಮನಸ್ಸನ್ನು ನಿಗ್ರಹಿಸುವುದರ ಜೊತೆಗೆ ಯಾವುದೇ ಆಯುಧವಿಲ್ಲದೆ ನಮ್ಮ ಆತ್ಮರಕ್ಷಣೆ ಮಾಡಿಕೊಳ್ಳಬಹುದಾಗಿದೆ. ಶಿಸ್ತುಬದ್ಧ ಉತ್ತಮ ಜೀವನವನ್ನು ರೂಪಿಸುತ್ತದೆ. ವಿದ್ಯಾರ್ಥಿಗಳು ಶಿಕ್ಷಕರು ನೀಡಿದ ಮಾರ್ಗದರ್ಶನದಲ್ಲಿ ಶಿಸ್ತಿನ ಜೀವನ ರೂಪಿಸಿಕೊಳ್ಳುವುದರ ಜೊತೆಗೆ ಈ ಕಲೆಯನ್ನು ಸ್ವಾರ್ಥಕ್ಕೆ ಯಾರು ಬಳಸಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.
ಫುನಾಕೋಷಿ ಕರಾಟೆ ಮುಖ್ಯಸ್ಥರಾದ ಬಳ್ಳಾರಿಯ ಶಿಹಾನ್ ಡಿ.ಸುರೇಶ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಹೊಸಪೇಟೆಯ ಹಿರಿಯ ಕರಾಟೆ ಶಿಕ್ಷಕ ಶಿಹಾನ್ ಹನುಮಂತಪ್ಪರವರು ಶಿಬಿರದ ಕರಾಟೆ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ನೂತನ ಗ್ರಾ.ಪಂ.ಸದಸ್ಯರಾದ ಇಂದಿರಾ ನಗರದ ಗುಂಡಾ ಸೋಮಪ್ಪ, ಎಲ್. ಸೂರ್ಯ ಪ್ರಕಾಶ, ವಕೀಲ ಎಲ್.ಮಲ್ಲಿಕಾರ್ಜುನ, ಎಲ್ ಭರತ್ ಕುಮಾರ, ಗುತ್ತಿಗೆದಾರರಾದ ಕಾಳಿ ಮಂಜುನಾಥ, ಬಿಜೆಪಿ ಎಸ್.ಸಿ ಮೋರ್ಚ ಜಿಲ್ಲಾ ಕಾರ್ಯದರ್ಶಿ ರವಿಕಿರಣ ಹಾಗೂ ಇತರರು ಇದ್ದರು.










