ಹೊಸಪೇಟೆ : ಮರಿಯಮ್ಮನಹಳ್ಳಿಯ ಹೆಚ್. ಪ್ರಣತಿಗೆ ಚಿನ್ನದ ಪದಕ…

242
firstsuddi

ಹೊಸಪೇಟೆ : ಬೆಂಗಳೂರಿನ ವಾಸವಿ ಯೂನಿಯನ್ ಚಾರಿಟಬಲ್ ಟ್ರಸ್ಟ್ ನವರು ಎಂ.ಎಸ್ಸಿ ಬಯೋಟೆಕ್ನಲ್ಲಿ ತೃತೀಯ ಸ್ಥಾನ ಪಡೆದ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯ ಹೆಚ್. ಪ್ರಣತಿ ಅವರಿಗೆ ಬೆಂಗಳೂರಿನ ವಾಸವಿ ವಿದ್ಯಾನಿಕೇತನ್ ಕ್ಯಾಂಪಸ್ನಲ್ಲಿ ನಡೆದ ಟ್ರಸ್ಟ್ ನ ಕಾರ್ಯಕ್ರಮದಲ್ಲಿ ಚಿನ್ನದ ಪದಕವನ್ನು ನೀಡಿ ಗೌರವಿಸಿದರು.
ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣದ ಹುಬ್ಬಳ್ಳಿ ಪ್ರಕಾಶರ ಪುತ್ರಿ ಹೆಚ್. ಪ್ರಣತಿಯು ಮೈಸೂರು ವಿಶ್ವವಿದ್ಯಾಲಯದ ಜೆಎಸ್ಎಸ್ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾ ವಿದ್ಯಾಲಯದಲ್ಲಿ 2019ನೇ ಇಸವಿಯಲ್ಲಿ ತೃತೀಯ ಸ್ಥಾನ ಪಡೆದಿದ್ದಳು. ಈ ಹಿನ್ನಲೆಯಲ್ಲಿ ಬೆಂಗಳೂರಿನ ವಾಸವಿ ಯೂನಿಯನ್ ಚಾರಿಟಬಲ್ ಟ್ರಸ್ಟ್ ನವರು ವಿದ್ಯಾರ್ಥಿನಿಯನ್ನು ಗುರುತಿಸಿ, ಬೆಂಗಳೂರಿನಲ್ಲಿ ವಾಸವಿ ವಿದ್ಯಾನಿಕೇತನ್ ಕ್ಯಾಂಪಸ್ನಲ್ಲಿ ನಡೆದ ಟ್ರಸ್ಟಿನ 54ನೇ ಪದಕ ವಿತರಣೆ ಸಮಾರಂಭದಲ್ಲಿ ಟ್ರಸ್ಟ್ ನ ವತಿಯಿಂದ ಚಿನ್ನದ ಪದಕವನ್ನು ನೀಡಿ ಗೌರವಿಸಿದರು. ಚಿನ್ನದ ಪದಕವನ್ನು ಎಫ್ಕೆಸಿಸಿಐನ ಹಿರಿಯ ಉಪಾಧ್ಯಕ್ಷ ಸಿ.ಎ.ಐ. ಪ್ರಸಾದ್ರು ಹೆಚ್.ಪ್ರಣತಿಗೆ ನೀಡಿ ಗೌರವಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ ಸಮಿತಿಯ ಸದಸ್ಯ ಮಾನಂದಿ ಸುರೇಶ್, ಟ್ರಸ್ಟ್ ನ ಪದಾಧಿಕಾರಿಗಳಾದ ಪಿ.ಸಿ. ಬಾಲರಾಜ್, ಆರ್. ನಂದಕುಮಾರ್, ಡಾ. ವೆಂಕಟೇಶ್ ಎಂ.ಎಸ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಸವಿ ಯೂನಿಯನ್ನನ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಬಿ.ಎಸ್.ಅರುಣ್ಕುಮಾರ್ ವಹಿಸಿದ್ದರು.