ಮರಿಯಮ್ಮನಹಳ್ಳಿ : ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ, ಕೊರೋನಾ ಓಡಿಸಿ : ಕುರಿಶಿವಮೂರ್ತಿ.

112
firstsuddi

ವರದಿ : ರಾಮಚಂದ್ರ ಮರಿಯಮ್ಮನಹಳ್ಳಿ

ಮರಿಯಮ್ಮನಹಳ್ಳಿ : ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ, ಕೊರೋನಾ ಓಡಿಸಿ, ಭಯ ಬೇಡ ಎಂದು ಕೆಪಿಸಿಸಿ ಸದಸ್ಯ ಹಾಗೂ ಸಮಾಜ ಸೇವಕ ಕುರಿಶಿವಮೂರ್ತಿ ಅಭಿಪ್ರಾಯಪಟ್ಟರು.
ಅವರಿಗೆ ಇತ್ತೀಚೆಗೆ ಕೊರೋನಾ ಸೋಂಕು ಧೃಡಪಟ್ಟ ಹಿನ್ನಲೆಯಲ್ಲಿ ಮನೆಯಲ್ಲಿಯೇ ಚಿಕಿತ್ಸೆ ಪಡೆದು, ಗುಣರಾಗಿ ಬಂದು ರೋಗದ ಸೋಂಕಿನ ಕುರಿತಾಗಿ ಅನುಭವಗಳು ಹಾಗೂ ನಾವು ಪಾಲಿಸಬೇಕಾದ ಎಚ್ಚರಿಕೆ ಕ್ರಮಗಳ ಕುರಿತು ಮಾತನಾಡಿದರು.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿ, ಕೆಪಿಸಿಸಿ ಸದಸ್ಯರಾದ ನಮಗೆ ನಮ್ಮದೇ ಆದ ಕೆಲಸ ಕಾರ್ಯಗಳ ಒತ್ತಡವಿರುತ್ತದೆ. ಈ ಮಧ್ಯೆ ಕೊರೋನಾ ಬಂದು ಕೈಕಟ್ಟಿ ಕೂಡುವಂತೆ ಮಾಡಿತ್ತು. ಆದರೆ ಧೃತಿಗೆಡದೇ ತಜ್ಞ ವೈದ್ಯರ ಸಲಹೆ ಮೇರೆಗೆ ಸೂಕ್ತ ಔಷಧೋಪಾಚಾರ ಮಾಡಿಕೊಂಡು ಚೇತರಿಸಿಕೊಂಡಿದ್ದೇನೆ ಎಂದರು.
ಕೊರೋನಾ ರೋಗ ಯಾರಿಗೂ ಬರಬಾರದು. ಈ ಕಾಯಿಲೆ ಮನುಷ್ಯನನ್ನು ತುಂಬಾ ಮಾನಸಿಕ ವೇದನೆಗೆ ಒಳಪಡಿಸುತ್ತದೆ. ಏಳೆಂಟು ದಿನಗಳವರೆಗೂ ತಿಂದ ಆಹಾರದ ರುಚಿಯೇ ತಿಳಿಯದಂತಾಗಿಸುತ್ತದೆ. ಹಸಿವಾದರೂ ಊಟ ಮಾಡಬೇಕೆನಿಸುವುದಿಲ್ಲ, ಊಟ ಮಾಡಿದರೆ ನಾಲಿಗೆಗೆ ಏನೂ ರುಚಿಸುವುದಿಲ್ಲ ಹಾಗಂತ ಧೃತಿಗೆಡುವಂತಿಲ್ಲ. ವೈದ್ಯರ ಔಷದೋಪಚಾರದ ಜೊತೆಗೆ ನಾವು ನಮ್ಮ ಆಹಾರದಲ್ಲಿ ಯಾವಾಗಲೂ ಸತ್ವಯುತ ಬಿಸಿಬಿಸಿ ಮನೆಯ ಆಹಾರವನ್ನೇ ಸೇವಿಸಬೇಕು. ಎಲ್ಲಾ ಪೋಷಕಾಂಶಗಳನ್ನು ಒಳಗೊಂಡಿರುವ ತರಕಾರಿ, ಸೊಪ್ಪು, ಸಿರಿಧಾನ್ಯಗಳನ್ನು ಅಡುಗೆಯಲ್ಲಿ ಬಳಸಬೇಕು ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಬೇರೆಯವರೊಂದಿಗೆ ಮಾತನಾಡುವ ಎಷ್ಟೇ ಆತ್ಮೀಯರಿದ್ದರೂ ಮುಖಕ್ಕೆ ಮಾಸ್ಕ್ ಬಳಸಿ, ಆಗಾಗ ಕೈಯನ್ನು ಸ್ಯಾನಿಟೈಸರ್‍ನಿಂದ ತೊಳೆಯುತ್ತಿರಿ. ಅವಶ್ಯಕತೆ ಇದ್ದರೇ ಮಾತ್ರ ಬೇರೆ ಊರುಗಳಿಗೆ ಪ್ರಯಾಣ ಮಾಡಿ. ಸಾಧ್ಯವಾದಷ್ಟು ಅನಗತ್ಯವಾಗಿ ಯಾರೂ ಹೊರ ಜಿಲ್ಲೆ ಅಥವಾ ಹೊರ ರಾಜ್ಯಗಳಿಗೆ ಪ್ರಯಾಣ ಮಾಡದಿದ್ದರೆ ಒಳಿತು ಎಂದು ಸಲಹೆ ನೀಡಿದರು.