ಮಹಾಕುಂಭಮೇಳದ ಹೆಸರಲ್ಲಿ ವ್ಯಕ್ತಿಗೆ 64 ಸಾವಿರ ರೂ. ವಂಚಿಸಿದ ಸೈಬರ್ ವಂಚಕರು.

44

ಬೆಂಗಳೂರು: . ಸೈಬರ್ ವಂಚಕರು ಟ್ರೆಂಡ್‍ಗೆ ತಕ್ಕಂತೆ ವಂಚನೆ ಮಾಡಲು ಶುರುಮಾಡಿದ್ದಾರೆ. ಇದೀಗ ಮಹಾಕುಂಭಮೇಳದ ಹೆಸರಿನಲ್ಲಿ ವ್ಯಕ್ತಿ ಒಬ್ಬ ವಂಚನೆಗೊಳಗಾಗಿದ್ದು, ಬರೋಬ್ಬರಿ 64,000 ರೂಪಾಯಿ ಕಳೆದುಕೊಂಡಿರುವ ಘಟನೆ ಬೆಂಗಳೂರಿನ ಜ್ಞಾನಭಾರತಿಯಲ್ಲಿ ನಡೆದಿದೆ. ಉತ್ತರ ಪ್ರದೇಶದ ಪ್ರಯಾಗ್‍ರಾಜ್‍ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡುವುದು ಕೋಟ್ಯಂತರ ಜನರ ಬಯಕೆಯಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡು ಕೆಲವು ವಂಚಕರು ಜನರಿಗೆ ವಂಚನೆ ಮಾಡಲು ಶುರುಮಾಡಿದ್ದಾರೆ. ಜ್ಞಾನಭಾರತಿಯ ಒಬ್ಬ ನಿವಾಸಿ ಪ್ರಯಾಗ್‍ರಾಜ್‍ಗೆ ತೆರಳುವ ಪ್ಲ್ಯಾನ್ ಮಾಡಿದ್ದರು. ಹಾಗೆಯೇ ಗೂಗಲ್‍ನಲ್ಲಿ ಸರ್ಚ್ ಮಾಡಿ ಕುಂಭಮೇಳಕ್ಕೆ ಹೋಗಲು ಎಷ್ಟು ವೆಚ್ಚ ತಗಲಬಹುದು ಎಂದು ನೋಡಿದ್ದಾರೆ. ಅದಾದ ಕೆಲವೇ ನಿಮಿಷಗಳಲ್ಲಿ ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿದೆ. ನಮ್ ಕಂಪನಿಯಿಂದ ಕಡಿಮೆ ಬೆಲೆಯಲ್ಲಿ ಪ್ರಯಾಗ್‍ರಾಜ್‍ಗೆ ಹೋಗುವ ಪ್ಯಾಕೆಜ್ ಇದೆ ಎಂದು ಪರಿಚಯ ಮಾಡಿಕೊಂಡಿದ್ದಾರೆ. ಕರೆ ಮಾಡಿದ ವ್ಯಕ್ತಿಯ ಮಾತನ್ನು ನಂಬಿ, ಅವರು ಹೇಳಿದ ಅಕೌಂಟ್‍ಗೆ ಹಂತ ಹಂತವಾಗಿ 64 ಸಾವಿರ ರೂಪಾಯಿ ಹಾಕಿದ್ದಾರೆ. ಹಣ ಹಾಕಿದ ಕೆಲವೇ ನಿಮಿಷಗಳ ಬಳಿಕ ಆ ವ್ಯಕ್ತಿಗೆ ಕರೆ ಮಾಡಿದಾಗ, ನಂಬರ್ ಸ್ವಿಚ್ ಆಫ್ ಬಂದಿದೆ. ನಂತರ ಮೋಸ ಹೋಗಿರುವ ಬಗ್ಗೆ ತಿಳಿದಾಗ ದೂರು ನೀಡಿದ್ದಾರೆ. ಹಣ ಹಾಕಿರುವ ದಾಖಲೆಯೊಂದಿಗೆ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿದ್ದಾರೆ.