ಬೆಂಗಳೂರು : ಮಹಾಮಾರಿ ಕೊರೊನಾ ವೈರಸ್ ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಲಾಕ್ಡೌನ್ ಮಾಡಿದ್ದು, ಇದೀಗಾ ಕೊರೊನಾ ವೈರಸ್ ತಡೆಗಟ್ಟಲು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು 50 ಲಕ್ಷ ರೂ ದೇಣಿಗೆ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಕೋವಿಡ್-19 ಮಹಾಮಾರಿ ದೇಶದಲ್ಲಿ ಹರಡುತ್ತಿದ್ದು, ಅದರ ವಿರುದ್ಧದ ಹೋರಾಟದ ಸಂದರ್ಭದಲ್ಲಿ ನನ್ನ ಕಳಕಳಿಯ ಕೊಡುಗೆಯಾಗಿದೆ. ಮೊದಲಿಗೆ ಮಂಡ್ಯದ ಮಿಮ್ಸ್ ಗೆ ಕೊರೋನಾ ವಿರುದ್ಧ ಹೋರಾಡುವ ಸಲುವಾಗಿ ವೆಂಟಿಲೇಟರ್ ಮತ್ತು ಅಗತ್ಯ ಸಲಕರಣೆಗಳನ್ನು ಖರೀದಿಸಲು ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ 50,00,000 ರೂ. ಗಳನ್ನು ನೀಡಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
ಬಳಿಕ ಮತ್ತೊಂದು ಟ್ವೀಟ್ ಮಾಡಿರುವ ಅವರು, ಪ್ರಧಾನ ಮಂತ್ರಿಗಳ ತುರ್ತು ಪರಿಹಾರ ನಿಧಿಗೆ ನನ್ನ ಎರಡು ತಿಂಗಳ ವೇತನ 2 ಲಕ್ಷ ರೂ. ಗಳನ್ನು ದೇಣಿಗೆಯಾಗಿ ನೀಡಿದ್ದೇನೆ. ಅಲ್ಲದೆ ಎರಡು ತಿಂಗಳ ವೇತನ 2 ಲಕ್ಷ ರೂ. ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿ ಕೋವಿಡ್-19ಕ್ಕೆ ನೀಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.










