ಬೆಳಗಾವಿ : ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿರುವ ಘಟನೆಗೆ ಬೇಸರ ವ್ಯಕ್ತಪಡಿಸಿದ ಕಲಾಪ, ಖಂಡನಾ ನಿರ್ಣಯ ಮಂಡಿಸಿತು. ಸರ್ಕಾರದ ಈ ನಿರ್ಧಾರಕ್ಕೆ ಸರ್ವ ಸದಸ್ಯರು ಸಹಮತ ಸೂಚಿಸಿದರು.
ವಿಧಾನಸಭೆಯಲ್ಲಿ ಮಾತನಾಡಿದ ಮಳವಲ್ಲಿ ಶಾಸಕ ಕೆ. ಅನ್ನದಾನಿ, ಧ್ವಜ ಸುಟ್ಟಿರುವ ಶಿವಸೇನೆ-ಎಂಇಎಸ್ ಪುಂಡರ ವಿರುದ್ಧ ಉಗ್ರ ಶಿಕ್ಷೆ ಆಗಬೇಕು. ಎಂಇಎಸ್ ಕಾರ್ಯಕರ್ತರ ಪುಂಡಾಟಿಕೆ ಸಹಿಸಲು ಸಾಧ್ಯವಿಲ್ಲ. ಎಂಇಎಸ್ ನಿಯಂತ್ರಣಕ್ಕೆ ಸರ್ಕಾರ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ಕಂದಾಯ ಸಚಿವ ಆರ್. ಅಶೋಕ್ ಮಾತನಾಡಿ, ಮಹಾರಾಷ್ಟ್ರ ನೆಲದಲ್ಲಿ ಧ್ವಜ ಸುಟ್ಟಿರುವುದು ಪ್ರತಿಯೊಬ್ಬ ಕನ್ನಡಿಗರಿಗೆ ನೋವು ತಂದಿದೆ. ನೆಲ, ಜಲ ಭಾಷೆ ಕಾಪಾಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಮಹಾರಾಷ್ಟ್ರದ ಶಿವಸೇನೆ ಹಾಗೂ ಇಲ್ಲಿನ ಎಂಇಎಸ್ ಕಾರ್ಯಕರ್ತರು ನಿರಂತರ ಪುಂಡಾಟಿಕೆ ಪ್ರದರ್ಶನ ಮಾಡುತ್ತಿದ್ದಾರೆ. ಮಹಾರಾಷ್ಟ್ರ ಸರ್ಕಾರದೊಂದಿಗೆ ಚರ್ಚಿಸಿ, ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆ ಸಿಗುವಂತೆ ಮಾಡಲು ಗಮನ ಸೆಳೆಯಲಾಗುವುದು. ನಿರ್ಣಯವನ್ನೂ ಮಹಾರಾಷ್ಟ್ರ ಸರ್ಕಾರಕ್ಕೆ ಕಳಿಸಿಕೊಡುತ್ತೇವೆ ಎಂದು ಸದನದಲ್ಲಿ ಸಚಿವ ಅಶೋಕ್ ಸರ್ಕಾರದ ಪರವಾಗಿ ಉತ್ತರಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಶಿವಸೇನೆ ಹಾಗೂ ಎಂಇಎಸ್ ಪುಂಡರು ಪದೇ ಪದೆ ಪುಂಡಾಟಿಕೆ ಪ್ರದರ್ಶನ ಮಾಡುತ್ತಿದ್ದಾರೆ. ಈ ಬೆಳವಣಿಗೆಯಿಂದ ಉಭಯ ರಾಜ್ಯಗಳಲ್ಲಿ ಶಾಂತಿಭಂಗ ಉಂಟಾಗುತ್ತಿದೆ. ಕನ್ನಡ ಧ್ವಜ ಸುಟ್ಟಿರುವ ಪ್ರಕರಣ ಗಂಭೀರವಾಗಿದ್ದು, ನೀವು ಖಂಡನಾ ನಿರ್ಣಯ ಮಂಡಿಸಿ, ನಾವೂ ಬೆಂಬಲಿಸುತ್ತೇವೆ. ಖಂಡನಾ ನಿರ್ಣಯವನ್ನು ಕೇಂದ್ರ ಸರ್ಕಾರ ಮತ್ತು ಮಹಾರಾಷ್ಟ್ರ ಸರ್ಕಾರಕ್ಕೆ ಕಳಿಸೋಣ ಎಂದು ಸಲಹೆ ನೀಡಿದರು.










