ಮಹಾಲಕ್ಷ್ಮಿ ಮರ್ಡರ್ ಕೇಸ್‍ನಲ್ಲಿ ಹಲವು ಅನುಮಾನ! ತಾಯಿ ಕೊಟ್ಟ ದೂರಿನಲ್ಲಿದೆ ಶಾಕಿಂಗ್ ವಿಚಾರ!

49

ಬೆಂಗಳೂರು: ವೈಯಾಲಿಕಾವಲ್ ಮಹಾಲಕ್ಷ್ಮೀ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಮತ್ತೊಂದು ಅನುಮಾನ ಮೂಡಿದೆ ಎನ್ನಲಾಗಿದೆ. ಕ್ರೈಂ ಸೀನ್ ನೋಡಿ ಒಬ್ಬನಿಂದ ಕೊಲೆಯಾಗಿಲ್ಲ ಎಂದು ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಯಾಕೆಂದರೆ ಕೊಲೆಯಾದ ಜಾಗದಲ್ಲಿ ಮಲ್ಟಿಪಲ್ ಫಿಂಗರ್ ಪ್ರಿಂಟ್ಸ್ ದೊರಕಿವೆ ಎಂದು ಹೇಳಲಾಗುತ್ತಿದೆ.
ತನಿಖೆ ನಡೆಸುತ್ತಿರುವ ಪೊಲೀಸರಿಗೆ ಮಹಾಲಕ್ಷ್ಮಿ ದೇಹವನ್ನ ತುಂಡು ತುಂಡಾಗಿ ಕತ್ತರಿಸಿದ್ದ ವೆಪನ್ ಕೂಡ ಸಿಕ್ಕಿಲ್ಲ. ಯಾವ ಮಾರಕಾಸ್ತ್ರದಿಂದ ಕತ್ತರಿಸಲಾಗಿದೆ ಎಂಬ ಬಗ್ಗೆ ಪೊಲೀಸರು ತಲೆ ಕೆಡಿಸಿಕೊಂಡಿದ್ದು, ಇದಕ್ಕಾಗಿ ಮರಣೋತ್ತರ ಪರೀಕ್ಷೆ ಹಾಗೂ ಎಫ್‍ಎಸ್‍ಎಲ್ ವರದಿಗಾಗಿ ಕಾಯುತ್ತಿದ್ದಾರೆ ಎನ್ನಲಾಗಿದೆ. ಯಾಕಂದ್ರೆ ಮರಣೋತ್ತರ ಪರೀಕ್ಷೆಯಲ್ಲಿ ಯಾವ ವೆಪನ್ ಬಳಸಿ ದೇಹ ಕತ್ತರಿಸಲಾಗಿದೆ ಅನ್ನೋದು ತಿಳಿಯಲಿದೆ. ಅಲ್ಲದೆ ಮನೆ ಕ್ಲೀನ್ ಮಾಡೋಕೆ ಕೆಮಿಕಲ್ ಬಳಸಲಾಗಿತ್ತಾ ಅನ್ನೋದು ಕೂಡ ಎಫ್‍ಎಸ್‍ಎಲ್ ವರದಿಯಲ್ಲಿ ಗೊತ್ತಾಗಲಿದೆ.
ಈ ನಡುವೆ ಮಹಾಲಕ್ಷ್ಮಿ ಕುಟುಂಬಸ್ಥರ ಮೇಲೆಯೇ ಹಲವು ಅನುಮಾನಗಳು ಮೂಡುತ್ತಿವೆ. ಮಹಾಲಕ್ಷ್ಮಿ ಪತಿ ಹೇಮಂತ್ ದಾಸ್ ಹಾಗೂ ಸಹೋದರರ ಮೇಲೂ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಯಾಕಂದ್ರೆ ಕೆಲ ವರ್ಷಗಳಿಂದಲೂ ಹೇಮಂತ್ ದಾಸ್ ಹಾಗೂ ಮಹಾಲಕ್ಷ್ಮಿ ನಡುವೆ ಸಂಬಂಧ ಸರಿಯಿರಲಿಲ್ಲವಂತೆ. ಜೊತೆಗೆ ಹಣಕಾಸಿನ ವಿಚಾರಕ್ಕೆ ಸಹೋದರರ ಜೊತೆಗೂ ಮಹಾಲಕ್ಷ್ಮಿ ಜಗಳವಾಡಿಕೊಂಡಿದ್ಲು ಎನ್ನಲಾಗಿದೆ. ಹಣಕ್ಕಾಗಿ ಮಹಾಲಕ್ಷ್ಮಿ ಬಳಿ ಸಹೋದರರು ಪೀಡಿಸುತ್ತಿದ್ದರು, ಎಷ್ಟು ಬಾರಿ ಕೊಡಬೇಕು ಕೆಲಸಕ್ಕೆ ಹೋಗಿ ಎಂದು ಮಹಾಲಕ್ಷ್ಮಿ ಬೈದು ಗಲಾಟೆ ಮಾಡಿದ್ಲಂತೆ. ಈ ಎಲ್ಲಾ ವಿಚಾರವನ್ನ ಮಹಾಲಕ್ಷ್ಮಿ ತಾಯಿ ಮೀನಾ ರಾಣ, ತಾವು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ತಾಯಿ ಮೀನಾ ರಾಣ ಅವರು ಮಗಳ ಕೊಲೆ ಸಂಬಂಧ ನೀಡಿರುವ ದೂರು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮೀನಾ ರಾಣಾಗೆ ನಾಲ್ವರು ಮಕ್ಕಳಿದ್ದು, ಈ ಪೈಕಿ ಮಹಾಲಕ್ಷ್ಮಿ ಮೊದಲನೆಯ ಮಗಳು ಉಳಿದಂತೆ ಮಹಾಲಕ್ಷ್ಮಿ ಸಹೋದರಿಯ ಹೆಸರು ಲಕ್ಷ್ಮಿ. ಲಕ್ಷ್ಮಿ ಮುಸ್ಲಿಂ ಯುವಕನನ್ನ ಮದುವೆಯಾಗಿ ಹೆಸರು ಬದಲಾಯಿಸಿಕೊಂಡಿದ್ದಳು. ಸೈಯದ್ ಎಂಬುವವರನ್ನ ಮದುವೆಯಾಗಿ ಸಾಹಿದ ಅಂತ ಹೆಸರು ಬದಲಾಯಿಸಿಕೊಂಡಿದ್ದಾಳೆ. ಮತ್ತೊಬ್ಬ ತಮ್ಮ ಹುಕುಂ ಸಿಂಗ್ ರಾಣ ಮದುವೆಯಾಗಿದ್ದು ಡೆಲಿವರಿ ಬಾಯ್ ಆಗಿದ್ದ. ಮತ್ತೊಬ್ಬ ನರೇಶ್, ಗಾರೆ ಕೆಲಸ ಮಾಡಿಕೊಂಡಿದ್ದ. ಇತ್ತ ಮಹಾಲಕ್ಷ್ಮಿ ಹೇಮಂತ್ ದಾಸ್ ಎಂಬಾತನ್ನ ಮದುವೆಯಾಗಿದ್ದು, 4 ವರ್ಷದ ಮಗುವಿತ್ತು. ಮೊಬೈಲ್ ಆಕ್ಸಸರಿ ಅಂಗಡಿ ಇಟ್ಟುಕೊಂಡಿದ್ದ ಹೇಮಂತ್ ದಾಸ್ ಮತ್ತು ಪತ್ನಿ ಮಹಾಲಕ್ಷ್ಮಿ ಇಬ್ಬರೂ ಪದೇ ಪದೇ ಜಗಳ ಮಾಡುತ್ತಿದ್ದರು ಎನ್ನಲಾಗಿದೆ. ಕಳೆದ 2023ರ ಅಕ್ಟೋಬರ್‌ನಲ್ಲಿ ಗಂಡನಿಂದ ದೂರಾಗಿದ್ದ ಮಹಾಲಕ್ಷ್ಮಿ, ವೈಯಾಲಿ ಕಾವಲ್‍ನಲ್ಲಿ ಬಾಡಿಗೆ ಮನೆ ಮಾಡಿದ್ದಳು. ಮಹಾಲಕ್ಷ್ಮಿ ತಮ್ಮ ಹುಕುಂ ಸಿಂಗ್ ಹಾಗೂ ಆತನ ಪತ್ನಿ ದೀಪಿಕಾ ಸಹ 15 ದಿನಗಳ ಕಾಲ ಜೊತೆಗಿದ್ದರು. ನಂತರ ಮಹಾಲಕ್ಷ್ಮಿ ಹಾಗೂ ಹುಕುಂ ಸಿಂಗ್ ನಡುವೆ ಜಗಳವಾಗಿತ್ತು. ಹೀಗಾಗಿ ಹುಕುಂ ಸಿಂಗ್ ತನ್ನ ಹೆಂಡತಿಯೊಂದಿಗೆ ಗುಂಜೂರಿಗೆ ಶಿಫ್ಟ್ ಆಗಿದ್ದ ಎನ್ನಲಾಗಿದೆ. ನಂತರ ವೈಯಾಲಿ ಕಾವಲ್ ಬಾಡಿಗೆ ಮನೆಯಲ್ಲಿ ಈಕೆ ಒಬ್ಬೊಂಟಿಯಾಗಿ ವಾಸವಾಗಿದ್ದಳು. ಕಳೆದ ಸೆಪ್ಟೆಂಬರ್ 2ರಂದು ತಂದೆಗೆ ಕರೆ ಮಾಡಿದ್ದ ಮಹಾಲಕ್ಷ್ಮಿ, ತಂದೆ ತಾಯಿಯನ್ನ ನೋಡಲು ಬರೋದಾಗಿ ಹೇಳಿದ್ದಳು. ಅದಾದ ಬಳಿಕ ಮತ್ತೆ ಪೋನ್ ಕಾಲ್ ಬಂದಿರಲಿಲ್ಲ, ಸೆಪ್ಟೆಂಬರ್ 21 ರಂದು ಬೆಳಗ್ಗೆ ಮನೆಗೆ ಬಂದಿದ್ದ ತಾಯಿಗೆ ತುಂಡು ತುಂಡಾಗಿ ಕತ್ತರಿಸಿದ್ದ ಮಹಾಲಕ್ಷ್ಮಿ ಮೃತದೇಹ ಕಂಡಿತ್ತು ಎಂದು ದೂರಿನಲ್ಲಿ ಹೇಳಲಾಗಿದೆ.