ಮಹಿಳೆಯರು ಸ್ವಾವಲಂಬಿಗಳಾದರೆ ದೇಶದ ಭವಿಷ್ಯ ಉಜ್ವಲ : ಕೆ.ಟಿ.ರಾಧಾಕೃಷ್ಣ

53
firstsuddi

ಚಿಕ್ಕಮಗಳೂರು: ಮಹಿಳೆಯರು ಸರ್ಕಾರ ಮತ್ತು ಸಂಘ-ಸಂಸ್ಥೆಗಳಿಂದ ದೊರೆಯುವ ಸೌಲಭ್ಯ ಮತ್ತು ಸವಲತ್ತುಗಳನ್ನು ಹಾಗೂ ದೊರೆತ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಬೆಳೆಯಬೇಕು ಎಂದು ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಸಲಹೆ ನೀಡಿದರು.

ನಿವೃತ್ತ ಪೊಲೀಸ್ ಅಧಿಕಾರಿ ದಿ| ಪಾರ್ಥಯ್ಯ ಮತ್ತು ದಿ| ಶಾರದಾ ಅವರ ಸ್ಮರಣಾರ್ಥ ನಗರದ ರಾಮನಹಳ್ಳಿಯಲ್ಲಿ ಆರಂಭಿಸಿರುವ ಶ್ರೀ ಗೌರಿಉಚಿತ ಹೊಲಿಗೆ ತರಬೇತಿ ಕೇಂದ್ರವನ್ನು ಇಂದು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಹಿರಿಯರ ಕಾಲದಲ್ಲಿ ಮಹಿಳೆಯರು ಅಡುಗೆ ಮನೆಗೆಷ್ಟೇ ಸೀಮಿತವಾಗಿದ್ದರು. ಅವರು, ಮನೆಯಿಂದ ಹೊರಬರಲಾರದ ಪರಿಸ್ಥಿತಿ ಇತ್ತು. ಆದರೆ, ಇಂದು ಪರಿಸ್ಥಿತಿ ಬದಲಾಗಿದೆ. ಮಹಿಳೆಯರ ಅಭಿವೃದ್ಧಿಗಾಗಿ ಸರ್ಕಾರ ಸಂಘ ಸಂಸ್ಥೆಗಳು ಅನೇಕ ಸೌಲಭ್ಯ ಮತ್ತು ಸವಲತ್ತುಗಳನ್ನು ನೀಡುತ್ತಿವೆ ಎಂದರು.

ಮಹಿಳೆಯರು ಈ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು ಸ್ವಾವಲಂಬಿಗಳಾಗಬೇಕು. ವಿಶೇಷವಾಗಿ ಶೋಷಿತ ಸಮುದಾಯದ ಮಹಿಳೆಯರು ಸ್ವಾವಲಂಬಿಗಳಾದರೆ ದೇಶದ ಭವಿಷ್ಯ ಉಜ್ವಲವಾಗುತ್ತದೆ ಎಂದು ತಿಳಿಸಿದರು.

ನಿವೃತ್ತ ಜಿಲ್ಲಾ ಸರ್ಜನ್ ಡಾ.ದೊಡ್ಡ ಮಲ್ಲಪ್ಪ ಮಾತನಾಡಿ, ಹಣಕ್ಕಾಗಿ ಜನ ಏನನ್ನು ಬೇಕಾದರೂ ಮಾಡಲು ತಯಾರಿರುವ ಇಂದಿನ ಕಾಲದಲ್ಲಿ ತಮ್ಮ ಜೇಬಿನಿಂದ ಹಣವನ್ನು ಹಾಕಿ ಮಹಿಳೆಯರಿಗೆ ಉಚಿತ ತರಬೇತಿ ಕೇಂದ್ರ ಸ್ಥಾಪಿಸಿರುವುದು ಶ್ಲಾಘನೀಯ. ಸಮಾಜದಲ್ಲಿ ಇಂಥವರ ಸಂಖ್ಯೆ ಹೆಚ್ಚಾಗಬೇಕು ಎಂದರು.

ಬಿಎಸ್‍ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ ಮಾತನಾಡಿ, ಓದಿದವರು ಉದ್ಯೋಗಕ್ಕೆ ಜೋತು ಬೀಳದೆ ಸ್ವಉದ್ಯೋಗಿಗಳಾಗಿ ಸ್ವಾವಲಂಬಿಗಳಾಗಬೇಕು ಎಂದು ಕಿವಿ ಮಾತು ಹೇಳಿದರು.

ಕೇಂದ್ರದ ವ್ಯವಸ್ಥಾಪಕ ರವಿಕುಮಾರ್ ಮಾತನಾಡಿ, ಬಡ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶದಿಂದ ಈ ಸಂಸ್ಥೆಯನ್ನು ಆರಂಭಿಸಿದ್ದು, ಮಹಿಳೆಯರು ಇದನ್ನು ಬಳಿಸಿಕೊಂಡು ಬೆಳೆಯಬೇಕು ಎಂದು ಮನವಿ ಮಾಡಿದರು.

ಸಮಾಜ ಸೇವಕ ಗುರುವೇಶ್, ನಗರಸಭೆ ಮಾಜಿ ಉಪಾಧ್ಯಕ್ಷ ಕೆಂಚಯ್ಯ, ತರಬೇತಿ ಕೇಂದ್ರದ ವ್ಯವಸ್ಥಾಪಕಿ ಲತಾ, ಬಿಎಸ್‍ಪಿ ಜಿಲ್ಲಾ ಉಪಾಧ್ಯಕ್ಷ ಕೆ.ಆರ್.ಗಂಗಾಧರ್ ಉಪಸ್ಥಿತರಿದ್ದರು.