ಮಂಡ್ಯ : ಮಾಜಿ ಶಾಸಕ ಡಾ.ಹೆಚ್ ಡಿ ಚೌಡಯ್ಯ(94) ಅವರು ವಿಧಿವಶರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಹೆಚ್ ಡಿ ಚೌಡಯ್ಯ ಅವರು ಇಂದು 2:15 ನಸುಕಿನ ವೇಳೆ ಮಂಡ್ಯದ ಹೊಳಲು ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರು ನಾಲ್ಕು ಬಾರಿ ಮಂಡ್ಯದ ಕೆರಗೋಡು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದು, ಎರಡು ಸಲ ವಿಧಾನ ಪರಿಷತ್ ಸದಸ್ಯರಾಗಿದ್ದರು. ಮಂಡ್ಯದ ಪಿ.ಇ.ಟಿ ಶಿಕ್ಷಣ ಸಂಸ್ಥೆಯ ಮಾಜಿ ಅಧ್ಯಕ್ಷರೂ ಆಗಿದ್ದರು.
ಹೆಚ್ ಡಿ ಚೌಡಯ್ಯ ನಿಧನಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ. ನಾಲ್ಕು ಅವಧಿಗೆ ಶಾಸಕರು, ಎರಡು ಅವಧಿಗೆ ವಿಧಾನ ಪರಿಷತ್ ಸದಸ್ಯರೂ ಆಗಿದ್ದ ಅವರು ಆದರ್ಶ ಜನಪ್ರತಿನಿಧಿ ಆಗಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಮಾಜಕ್ಕೆ ಎಣೆ ಇಲ್ಲದಷ್ಟು ಸೇವೆ ಸಲ್ಲಿಸಿದ್ದಾರೆ. ಹೆಚ್ ಡಿ ಚೌಡಯ್ಯ ಅವರ ಅಗಲಿಕೆಯೊಂದಿಗೆ ಪ್ರಾಮಾಣಿಕ, ಸೇವಾತತ್ಪರ, ನಿಸ್ವಾರ್ಥ ರಾಜಕಾರಣದ ಕೊಂಡಿಯೊಂದು ಕಳಚಿದಂತಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬದವರು ಹಾಗೂ ಅಭಿಮಾನಿಗಳಿಗೆ ಭಗವಂತ ಕರುಣಿಸಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.










