ಬೆಂಗಳೂರು : ಮುಷ್ಕರ ವೇಳೆ ವಜಾಗೊಂಡಿದ್ದ ಸಾರಿಗೆ ನೌಕರರನ್ನು ಮರು ನೇಮಕ ಮಾಡಲಾಗುವುದು ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.
ಏಪ್ರಿಲ್ ನಲ್ಲಿ ನಡೆದ ಸಾರಿಗೆ ಮುಷ್ಕರದ ವೇಳೆ ನೌಕರರ ಮೇಲೆ ನಿಗಮಗಳು ವಜಾ ಅಸ್ತ್ರ ಪ್ರಯೋಗಿಸಿದ್ದವು. ಈ ವೇಳೆ, 4,200 ನೌಕರರನ್ನ ವಜಾಗೊಳಿಸಲಾಗಿತ್ತು. ಹೀಗಾಗಿ ನೌಕರರ ಮರುನೇಮಕ ಸೇರಿ ಹಲವು ಬೇಡಿಕೆ ಈಡೇರಿಸುವಂತೆ ನಿನ್ನೆ ಮತ್ತೆ ಪ್ರತಿಭಟನೆ ನಡೆದಿತ್ತು.
ವಜಾಗೊಂಡಿದ್ದ 4,200 ಸಾರಿಗೆ ನೌಕರರನ್ನು ಮರು ನೇಮಕ ಮಾಡಲು ಸರ್ಕಾರ ಆದೇಶ ನೀಡಿದ್ದು, ಸಾರಿಗೆ ಸಚಿವರು ಹಾಗೂ ನೌಕರರ ನಡುವೆ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಈ ಬಗ್ಗೆ ಮಾತನಾಡಿದ ಸಚಿವ ಬಿ.ಶ್ರೀರಾಮುಲು, ಸಾರಿಗೆ ಯೂನಿಯನ್ ನಾಯಕರ ಜೊತೆ ಚರ್ಚೆ ಮಾಡಲಾಗಿದೆ. 12 ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿದ್ದರು. ನಿನ್ನೆ ಮುಖ್ಯಮಂತ್ರಿಯೊಂದಿಗೆ ಚರ್ಚೆ ನಡೆಸಲಾಗಿದೆ. ಸಾರಿಗೆ ಇಲಾಖೆಯಲ್ಲಿ ಯಾವುದೇ ರೀತಿ ತೊಂದರೆಯಾಗಬಾರದೆಂದು ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ವೇತನ ತಾರತಮ್ಯ ಬಗ್ಗೆಯೂ ಸಾರಿಗೆ ನೌಕರರು ಬೇಡಿಕೆ ಇಟ್ಟಿದ್ದರು. ಮುಖ್ಯಮಂತ್ರಿಗಳೊಂದಿಗೆ ಈ ಬಗ್ಗೆಯೂ ಮಾತಾನಾಡುವ ಯೋಚನೆ ಇದೆ. ಅವರ ಪ್ರಮುಖವಾದ 4,200 ಸಾರಿಗೆ ನೌಕರರನ್ನ ಪುನರ್ ನೇಮಕ ಬಗ್ಗೆ ಒತ್ತಡ ಇತ್ತು. ಈ ಬಗ್ಗೆ ಮೊದಲು ಆದ್ಯತೆ ಕೊಟ್ಟು ಮರು ನೇಮಕ ಮಾಡುತ್ತೇವೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದರು.










