ಮೂಡಿಗೆರೆ ಅತಿವೃಷ್ಠಿ ಪ್ರದೇಶಗಳ ಪಟ್ಟಿಯಲ್ಲಿ ಸೇರಿಸುವಂತೆ ಕೆಂಪೇಗೌಡ ಒಕ್ಕಲಿಗರ ವೇದಿಕೆ ವತಿಯಿಂದ ಮನವಿ…

106
firstsuddi

ಮೂಡಿಗೆರೆ : ಅತಿವೃಷ್ಠಿ ಪ್ರದೇಶಗಳ ಪಟ್ಟಿಯಲ್ಲಿ ಮೂಡಿಗೆರೆ ಹಾಗೂ ಕಳಸ ತಾಲ್ಲೂಕುಗಳನ್ನು ಸೇರಿಸುವಂತೆ ಕೆಂಪೇಗೌಡ ಒಕ್ಕಲಿಗರ ವೇದಿಕೆ ವತಿಯಿಂದ ಇಂದು ಮುಖ್ಯಮಂತ್ರಿಯವರಿಗೆ ಮೂಡಿಗೆರೆ ತಹಶೀಲ್ದಾರ್ ಅವರ ಮೂಲಕ ಮನವಿ ಸಲ್ಲಿಸಲಾಯಿತು.

2020-21ಸಾಲಿನ ಅತಿವೃಷ್ಠಿ ಪ್ರವಾಹ ಪೀಡಿತ ತಾಲ್ಲೂಕುಗಳೆಂದು 13 ಜಿಲ್ಲೆಗಳ 61 ತಾಲ್ಲೂಕುಗಳನ್ನು ಸೇರ್ಪಡೆಗೊಂಡಿವೆ. ಆದರೆ ಅತಿ ಹೆಚ್ಚು ಮಳೆ ಆಗುವ ಮೂಡಿಗೆರೆ ಹಾಗೂ ಕಳಸ ತಾಲ್ಲೂಕುಗಳನ್ನು ಕೈಬಿಟ್ಟಿದ್ದು, ಕಳೆದ 3 ವರ್ಷಗಳ ಹಿಂದೆ ಭೂಕುಸಿತ, ಅನಾಹುತಗಳಾಗಿದ್ದು, ಈ ಪ್ರದೇಶವನ್ನು ಕಡೆಗಣಿಸಲಾಗಿದೆ ಹಾಗೂ ತಾಲ್ಲೂಕಿನ ಹಲವು ಭಾಗಗಳಲ್ಲಿ ರಸ್ತೆ, ಸೇತುವೆ, ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ. ಅಂದಿನ ಮುಖ್ಯಮಂತ್ರಿ ಹಾಗೂ ಸಚಿವರುಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಕೊಟ್ಟ ಭರವಸೆಗಳು ಇನ್ನೂ ಈಡೇರಿಲ್ಲ. ಮಳೆಯಿಂದ ಬಿದ್ದಿರುವ ಎಷ್ಟೋ ಮನೆಗಳು ನಿರ್ಮಾಣವಾಗಿಲ್ಲ. ರಾಜ್ಯಸರ್ಕಾರ ಇದನ್ನು ಪರಿಶೀಲಿಸಿ ಮೂಡಿಗೆರೆ ಹಾಗೂ ಕಳಸ ತಾಲ್ಲೂಕನ್ನು ಅತಿವೃಷ್ಠಿ ಪ್ರದೇಶ ಪಟ್ಟಿಗೆ ಸೇರಿಸಬೇಕು ಎಂದು ಮನವಿ ಮಾಡಲಾಯಿತು.

 ಮನವಿ ಸಲ್ಲಿಸಿ ಮಾತನಾಡಿದ ಕೆಂಪೇಗೌಡ ಯುವಶಕ್ತಿ ತಾಲ್ಲೂಕು ಅದ್ಯಕ್ಷ ಕಡಿದಾಳು ಬ್ರಿಜೇಶ್ ಅವರು, ಪ್ರಥಮವಾಗಿ ಅತಿವೃಷ್ಠಿ ಪ್ರದೇಶವಾಗಿ ಮೂಡಿಗೆರೆ ಹಾಗೂ ಕಳಸ ತಾಲ್ಲೂಕನ್ನು ಮಾಡಬೇಕಿತ್ತು ಆದರೆ ಕಡೆಗಣಿಸಿರುವುದು ದುರಂತ. ಕಳೆದ ಮೂರು ವರ್ಷಗಳಿಂದ ಕಾಫಿ ಬೆಳರಗಾರರ ಸಮಸ್ಯೆ ಹೇಳತೀರದು. ಆದರೆ ಸರ್ಕಾರ ಮಾತ್ರ ನಮ್ಮ ತಾಲ್ಲೂಕನ್ನು ಕಡೆಗಣಿಸುತ್ತಿದೆ. ನಮ್ಮ ಶಾಸಕರು ರಾಜ್ಯ ಸರ್ಕಾರಕ್ಕೆ ಹಲವು ಬಾರಿ ಗಮನ ಸೆಳೆದರೂ ಏನು ಪ್ರಯೋಜನವಾಗಿಲ್ಲ. ಶಾಸಕರು ಬೆಂಗಳೂರಿನಲ್ಲಿ ಏಕಾಂಗಿ ಪ್ರತಿಭಟನೆ ನಡೆಸಿದ್ದಾರೆ ಮುಂದಿನ ದಿನಗಳಲ್ಲಿ ಕೆಂಪೇಗೌಡ ಒಕ್ಕಲಿಗರ ವೇದಿಕೆ ಕಳಸ ಹಾಗೂ ಮೂಡಿಗೆರೆ ತಾಲ್ಲೂಕನ್ನು ಅತಿವೃಷ್ಠಿ ಪ್ರದೇಶಗಳ ಪಟ್ಟಿಯಲ್ಲಿ ಸೇರಿಸದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಬಕ್ಕಿ ಪ್ರಸಾದ್, ಲಕ್ಷ್ಮಣಗೌಡ, ಹಳ್ಳಿಬೈಲು ಹರೀಶ್, ಬಿಳ್ಳೂರು ಮುರಳಿ, ಹೆಗ್ಗರವಳ್ಳಿ ಮಧು, ಸೇರಿದಂತೆ ಕೆಂಪೇಗೌಡ ಒಕ್ಕಲಿಗರ ವೇದಿಕೆಯ ಸದಸ್ಯರು ಇದ್ದರು.