ಮೂಡಿಗೆರೆ : ಜಿ.ಹನುಮನಹಳ್ಳಿಯಲ್ಲಿ ಕಲುಷಿತ ನೀರು ಮತ್ತು ಆಹಾರ ಸೇವನೆಯಿಂದ ಅನಾರೋಗ್ಯಕ್ಕೆ ಈಡಾಗಿದ್ದ ಗ್ರಾಮಸ್ಥರ ಆರೋಗ್ಯ ವಿಚಾರಣೆ ನಡೆಸುವ ಸಲುವಾಗಿ ಜಿಲ್ಲಾ ಪಂಚಾಯತಿ ಸದಸ್ಯರು ಮೂಡಿಗೆರೆ ಎಂ.ಜಿ.ಎಂ.ಆಸ್ಪತ್ರೆಗೆ ಭೇಟಿ ನೀಡಿದರು.
ಇತ್ತೀಚೆಗೆ ಗೋಣಿಬೀಡಿನ ಹನುಮನಹಳ್ಳಿಯಲ್ಲಿ ಕಲುಷಿತ ನೀರು ಮತ್ತು ಆಹಾರ ಸೇವನೆ ಮಾಡಿ 15 ಜನ ಗ್ರಾಮಸ್ಥರು ತೀವ್ರ ಅಸ್ವಸ್ಥರಾಗಿ ಮೂಡಿಗೆರೆಯ ಎಂ.ಜಿ.ಎಂ.ಆಸ್ಪತ್ರೆಗೆ ದಾಖಲಾಗಿದ್ದರು. ಜಿ.ಪಂ.ಸದಸ್ಯರು, ತಾ.ಪಂ. ಸದಸ್ಯರು ಹಾಗೂ ಗೋಣಿಬೀಡು ಗ್ರಾ.ಪಂ. ಸದಸ್ಯರುಗಳು ಇಂದು ಎಂ.ಜಿ.ಎಂ ಆಸ್ಪತ್ರೆಗೆ ಭೇಟಿ ನೀಡಿ ದಾಖಲಾಗಿದ್ದ ಗ್ರಾಮಸ್ಥರಿಗೆ ಹಣ್ಣು ಹಂಪಲುಗಳನ್ನು ಕೊಟ್ಟು ಶೀಘ್ರ ಗುಣಮುಖರಾಗುವಂತೆ ಹಾರೈಸಿದರು.
ಭೇಟಿ ನೀಡಿದ ಸಂದರ್ಭದಲ್ಲಿ ಜಿ.ಪಂ.ಸದಸ್ಯೆ ಅಮಿತಾ ಮುತ್ತಪ್ಪ ಅವರು ಫಸ್ಟ್ ಸುದ್ದಿಯೊಂದಿಗೆ ಮಾತನಾಡಿ, ಜಿ.ಹನುಮನಹಳ್ಳಿ ಗ್ರಾಮಸ್ಥರು ಹಿಂದಿನಿಂದಲೂ ಹಳ್ಳದ ನೀರನ್ನು ತಮ್ಮ ದಿನನಿತ್ಯದ ಕಾಯಕಕ್ಕೆ ಬಳಸುತ್ತಿದ್ದರು. ಆದರೆ ಆಧುನಿಕತೆ ಬೆಳೆದಂತೆ ಹಳ್ಳದ ನೀರು ಕಲುಷಿತವಾಗಿದ್ದು ಕೆಲವು ದಿನಗಳ ಹಿಂದೆ ಹಳ್ಳದ ಕಲುಷಿತ ನೀರನ್ನು ಬಳಕೆ ಮಾಡಿದ್ದ ಹಿನ್ನೆಲೆಯಲ್ಲಿ ಗ್ರಾಮದ 15ಕ್ಕೂ ಹೆಚ್ಚು ಗ್ರಾಮಸ್ಥರು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಈ ವಿಚಾರ ತಿಳಿದು ಅವರ ಆರೋಗ್ಯ ವಿಚಾರಣೆ ಮಾಡಿ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿ, ಗ್ರಾಮಕ್ಕೆ ಅಗತ್ಯವಿರುವ ಶುದ್ಧ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ತಂದಿರುವ ಮಾಹಿತಿ ತಿಳಿಸಲು ಬಂದಿರುವುದಾಗಿ ತಿಳಿಸಿದರು. ಇದೀಗ ಜಿ.ಹನುಮನಹಳ್ಳಿ ಗ್ರಾಮಕ್ಕೆ ಶಾಸಕರ, ಜಿ.ಪಂ., ತಾ.ಪಂ ಹಾಗೂ ಗ್ರಾ.ಪಂ ವತಿಯಿಂದ ಗ್ರಾಮದಲ್ಲಿ ಹೊಸದಾಗಿ ಬೋರ್ವೆಲ್ ಕೊರೆಸಿ, ಮೋಟಾರ್ ಅಳವಡಿಸಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದರು.
ಗ್ರಾಮಸ್ಥರು ತೀವ್ರ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಗೋಣಿಬೀಡು ಸರ್ಕಾರಿ ಆಸ್ಪತ್ರೆಯನ್ನು ತಾತ್ಕಾಲಿಕವಾಗಿ 24 ಗಂಟೆ ಸೇವೆ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಗ್ರಾಮಸ್ಥರು ಬಳಸುತ್ತಿದ್ದ ನೀರನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದು, ಗ್ರಾಮಸ್ಥರು ಕಲುಷಿತ ನೀರನ್ನು ಕುಡಿಯದಂತೆ ಎಚ್ಚರ ವಹಿಸಲಾಗಿದೆ. ಅಲ್ಲದೆ ಗ್ರಾ.ಪಂ. ವತಿಯಿಂದ ನಿರಂತರವಾಗಿ ಗ್ರಾಮಸ್ಥರ ಆರೋಗ್ಯವನ್ನು ವಿಚಾರಣೆ ನಡೆಸುತ್ತಿದ್ದು ಸೂಕ್ತ ಎಚ್ಚರಿಕೆ ವಹಿಸಲಾಗುತ್ತಿದೆ. ಅಲ್ಲದೆ ಅನಾರೋಗ್ಯಕ್ಕೆ ಒಳಗಾಗಿರುವ ಗ್ರಾಮಸ್ಥರಿಗೆ ಉತ್ತಮ ಚಿಕಿತ್ಸೆ ನೀಡಬೇಕು ಎಂದು ಆಸ್ಪತ್ರೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಾಲ್ಲೂಕು ಪಂ.ಸದಸ್ಯ ಸುಂದರ್ ಕುಮಾರ್ ತಿಳಿಸಿದರು.
ಆಸ್ಪತ್ರಗೆ ಭೇಟಿ ನೀಡಿದ ಸಮಯದಲ್ಲಿ ಗೋಣಿಬೀಡು ಗ್ರಾ.ಪಂ.ಅಧ್ಯಕ್ಷ ದಿನೇಶ್, ಜಯ ಕರ್ನಾಟಕ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಬಿಳ್ಳೂರು ಮುರುಳಿ ,ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು, ತಾಲ್ಲೂಕು ಆರೋಗ್ಯ ಇಲಾಖೆ ಅಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಬಿ.ಸಿ.ಎಂ ಇಲಾಖೆ ಅಧಿಕಾರಿಗಳು ಹಾಗೂ ಗಿರಿಜನ ಇಲಾಖೆ ಅಧಿಕಾರಿಗಳು ಹಾಜರಿದ್ದರು.
Home ಸ್ಥಳಿಯ ಸುದ್ದಿ ಮೂಡಿಗೆರೆ : ಎಂ.ಜಿ.ಎಂ ಆಸ್ಪತ್ರೆಗೆ ಜಿ.ಪಂ.ಸದಸ್ಯೆ ಅಮಿತಾ ಮುತ್ತಪ್ಪ ಹಾಗೂ ತಾ.ಪಂ. ಸದಸ್ಯರು ಭೇಟಿ :...










