ಮೂಡಿಗೆರೆ : ಕಸ್ತೂರಿ ರಂಗನ್ ವರದಿ ಜಾರಿಯಾಗದಂತೆ ತಡೆಯುವ ಸಲುವಾಗಿ ಸರ್ಕಾರದ ಮೇಲೆ ಒತ್ತಡ ಹಾಕಲು ಎಲ್ಲಾ ಚುನಾಯಿತ ಪ್ರತಿನಿಧಿಗಳು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಹೋರಾಟಕ್ಕೆ ಮುಂದಾಗಬೇಕು ಎಂದು ಕಾಂಗ್ರೆಸ್ನ ವಕ್ತಾರ ಎಂ.ಎಸ್ ಅನಂತ್ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಾಲ್ಲೂಕಿನ 18 ಗ್ರಾಮ ಪಂಚಾಯಿತಿ ವ್ಯಾಪ್ತಿಯ 33 ಹಳ್ಳಿಗಳು ಕಸ್ತೂರಿ ರಂಗನ್ ವರದಿಯಲ್ಲಿ ಸೇರ್ಪಡೆಯಾಗಿದ್ದು, ವರದಿ ಜಾರಿಯಾದರೆ ಗ್ರಾಮೀಣ ಪ್ರದೇಶದ ಅಭಿವೃದ್ಧಿ ಚಿತ್ರಣವೇ ಬದಲಾಗುತ್ತದೆ. ಮೂಲಭೂತ ಸವಲತ್ತುಗಳಿಗೂ ಪರದಾಡುವ ಸ್ಥಿತಿ ಎದುರಾದರೂ ಆಶ್ಚರ್ಯ ಪಡಬೇಕಾಗಿಲ್ಲ, ಈಗಾಗಲೇ ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿ ತಾಲ್ಲೂಕು ಸೇರಿದಂತೆ ಜಿಲ್ಲೆಯಲ್ಲಿ ಹಲವು ಗ್ರಾಮ ಪಂಚಾಯಿತಿಗಳು ನಾಮಪತ್ರ ಸಲ್ಲಿಸದೇ ಹಾಗೂ ನಾಮಪತ್ರಗಳನ್ನು ಹಿಂಪಡೆದುಕೊಂಡು ಚುನಾವಣೆಯನ್ನು ಬಹಿಷ್ಕರಿಸಿದೆ. ಕಸ್ತೂರಿ ರಂಗನ್ ವರದಿಯ ಕುರಿತು ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸುವಂತೆ ಒತ್ತಾಯಿಸಲು ಚುನಾವಣೆಯನ್ನು ಬಹಿಷ್ಕರಿಸುವಂತೆ ಚುನಾಯಿತ ಪ್ರತಿನಿಧಿಗಳು ಕರೆಕೊಟ್ಟಿರುವುದು ಉತ್ತಮ ಬೆಳವಣಿಗೆಯಾಗಿದೆ. ಆದರೆ ಚುನಾಯಿತ ಪ್ರತಿನಿಧಿಗಳು ತಾವು ಅಧಿಕಾರವನ್ನು ಅನುಭವಿಸುತ್ತಾ ಸ್ಥಳಿಯ ಚುನಾವಣೆಗಳನ್ನು ಬಹಿಷ್ಕರಿಸುವುದರಿಂದ ಹೋರಾಟಕ್ಕೆ ಶಕ್ತಿ ಬರುವುದಿಲ್ಲ. ಬದಲಾಗಿ ಎಲ್ಲಾ ಚುನಾಯಿತ ಪ್ರತಿನಿಧಿಗಳು ಸಮೂಹಿಕವಾಗಿ ತಮ್ಮ ಹುದ್ದೆಗಳಿಗೆ ಸಾಮೂಹಿಕ ರಾಜೀನಾಮೆಯನ್ನು ನೀಡಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಿ ಕಸ್ತೂರಿ ರಂಗನ್ ವರದಿಯನ್ನು ಪರಿಷ್ಕೃತ ಕರಡು ಜಾರಿಯಾಗದಂತೆ ತಡೆಯಬೇಕಿದೆ. ರಾಜ್ಯ ಸರ್ಕಾರವು ಕೂಡಲೇ ಕೇರಳ ಮಾದರಿಯಲ್ಲಿ ವರದಿನ್ನು ಮಾರ್ಪಡಿಸುವಂತೆ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಲು ಒಕ್ಕೊರಳಿನಿಂದ ಒತ್ತಾಯಿಸಬೇಕಿದೆ ಎಂದಿದ್ದಾರೆ.










