ಮೂಡಿಗೆರೆ : ಕ್ಷಯ ರೋಗವನ್ನು ನಮ್ಮ ದೇಶದಿಂದ ಸಂಪೂರ್ಣವಾಗಿ ಮುಕ್ತಗೊಳಿಸಲು ಎಲ್ಲರ ಸಹಕಾರ ಅತ್ಯಗತ್ಯ : ಡಾ.ಸುಂದರೇಶ್.

166
firstsuddi

ಮೂಡಿಗೆರೆ : ಕ್ಷಯ ರೋಗವನ್ನು ನಮ್ಮ ದೇಶದಿಂದ ಸಂಪೂರ್ಣವಾಗಿ ಮುಕ್ತಗೊಳಿಸಲು ಎಲ್ಲರ ಸಹಕಾರ ಅತ್ಯಗತ್ಯ ಎಂದು ತಾಲ್ಲೂಕು ಮುಖ್ಯ ಆರೋಗ್ಯ ಅಧಿಕಾರಿ ಡಾ. ಸಂದರೇಶ್ ಅವರು ಅಭಿಪ್ರಾಯ ಪಟ್ಟರು.
ಪಟ್ಟಣದ ಮಹಾತ್ಮಗಾಂಧಿ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ಸಕ್ರಿಯ ಕ್ಷಯರೋಗ ಪತ್ತೆ ಹಾಗೂ ಚಿಕಿತ್ಸಾ ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕ್ಷಯ ರೋಗ ಒಂದು ಸಾಮಾಜಿಕ ಪಿಡುಗು. ಇಂಥಹ ರೋಗವನ್ನು ಅಲಕ್ಷ್ಯ ಮಾಡುವುದು ಒಳ್ಳೆಯದಲ್ಲ. 2025 ರ ವೇಳೆಗೆ ಕ್ಷಯರೋಗ ಮುಕ್ತ ಭಾರತವನ್ನು ಹೊಂದಲು ಭಾರತ ಸರ್ಕಾರ ಉದ್ದೇಶ ಹೊಂದಿದೆ. ಆರೋಗ್ಯಯುತ ಸಮಾಜ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರತಿಯೊಬ್ಬರು ಆರೋಗ್ಯ ಇಲಾಖೆಯ ಜೊತೆಗೆ ಕೈ ಜೋಡಿಸುವುದರ ಜೊತೆಗೆ ಸಾಮಾಜಿಕ ಆರೋಗ್ಯದ ಕಡೆ ಗಮನ ಕೊಡುವ ಅಗತ್ಯತೆ ಇದೆ ಎಂದರು.
ಎಂಜಿಎಂ ಆಸ್ಪತ್ರೆಯ ಆಡಳಿತ ಅಧಿಕಾರಿ ಡಾ.ಶಾಂಭವಿ ಅವರು ಮಾತನಾಡಿ, ಕ್ಷಯ ರೋಗವನ್ನು ಪತ್ತೆ ಮಾಡುವ ಸಲುವಾಗಿ, ಪ್ರತೀ ತಾಲ್ಲೂಕು ಕೇಂದ್ರ ಆಸ್ಪತ್ರೆಗಳಿಗೆ ಸಕ್ರಿಯ ಕ್ಷಯರೊಗ ಪತ್ತೆ ಯಂತ್ರವನ್ನು ಸರ್ಕಾರ ನೀಡಿದೆ. ಕ್ಷಯ ರೋಗದ ಚಿಕಿತ್ಸೆ ಉಚಿತವಾಗಿದ್ದು, ಕ್ಷಯ ರೋಗದ ಪತ್ತೆಯಾದಲ್ಲಿ ತ್ವರಿತವಾಗಿ ಚಿಕಿತ್ಸೆ ಪಡೆಯಬಹುದಾಗಿದೆ. ಪ್ರಾರಂಭಿಕ ಹಂತದಲ್ಲಿಯೇ ರೋಗ ಪತ್ತೆಯಾದಲ್ಲಿ ಚಿಕಿತ್ಸೆಗೆ ಸೂಕ್ತ ಪರಿಹಾರ ಕಂಡುಕೊಂಡು ರೋಗದಿಂದ ಬೇಗ ಮುಕ್ತರಾಗಬಹುದು. ಕ್ಷಯ ರೋಗ ಒಂದು ಸಾಮಾನ್ಯ ರೋಗವಾಗಿದ್ದರೂ ಸಹ ಅದರ ಬಗೆಗಿನ ನಿರ್ಲಕ್ಯ ಜೀವಕ್ಕೆ ಕುತ್ತು ತರಬಹುದು. ಆದುದರಿಂದ ಸಾರ್ವಜನಿಕರು ಕ್ಷಯ ರೋಗ ಲಕ್ಷಣಗಳನ್ನು ನಿರ್ಲಕ್ಷಿಸದೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಡಾ. ಮಾನಸ, ಡಾ. ಇಮ್ರಾನ್, ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಪ್ರದೀಪ್, ಜಯನಾಯಕ್ ಸೇರಿದಂತೆ ಹಲವು ಸಾರ್ವಜನಿಕರು ಭಾಗಿಯಾದರು.