ಮೂಡಿಗೆರೆ : ಈ ಬಾರಿಯ ಸಾಂತಾ ಕ್ಲಾಸ್‍ನ ಭೇಟಿಗೆ ಕೊರೊನಾ ಅಡ್ಡಿ..!

513
firstsuddi

ಕೊಟ್ಟಿಗೆಹಾರ : ಏಸು ಕ್ರಿಸ್ತರ ಜನ್ಮದಿನವಾದ ಕ್ರಿಸ್‍ಮಸ್ ಹಬ್ಬಕ್ಕೆ ಎರಡು ವಾರ ಇರುವಾಗಲೇ ಸಾಂತಾ ಕ್ಲಾಸ್ ಪ್ರತಿ ಕ್ರೈಸ್ತರ ಕುಟುಂಬಗಳಿಗೆ ಭೇಟಿ ಕೊಟ್ಟು ನೃತ್ಯ ಮಾಡಿ ಸರ್ವರನ್ನು ಸಂಭ್ರಮಿಸುವಂತೆ ಶುಭಾಷಯ ಕೋರುವುದು ಸಂಪ್ರದಾಯ. ಆದರೆ ಈ ಬಾರಿ ಸಾಂತಾ ಕ್ಲಾಸ್ ಮನೆಮನೆಗೆ ತೆರಳಿ ಶುಭಾಷಯ ಕೋರುವ ಸಂಭ್ರಮಕ್ಕೆ ಕೊರೊನಾ ಅಡ್ಡಿಯಾಗಿದೆ.
ಹಲವೆಡೆ ಈ ಬಾರಿ ಕೊರೊನಾ ದಿಸೆಯಲ್ಲಿ ಕ್ರಿಸ್‍ಮಸ್ ಶುಭಾಷಯ ನೀಡಲು ಬರುವ ಸಾಂತಾ ಕ್ಲಾಸ್‍ನ ಕಾರ್ಯಕ್ರಮ ರದ್ದುಗೊಂಡಿದೆ. ಕೆಲವು ಕಡೆ ಒಂದೇ ಮನೆಯಲ್ಲಿ ಕೆಲವೇ ಮಂದಿ ಸೇರಿ ಅಂತರ ಕಾಪಾಡಿ ಕ್ರಿಸ್‍ಮಸ್ ಶುಭಾಷಯ ಕೋರುವ ಕಾರ್ಯಕ್ರಮ ನಡೆದಿದೆ. ಡಿಸೆಂಬರ್ 25 ಬಂತೆಂದರೆ ಸರ್ವರಿಗೂ ಒಂದು ಸಂಭ್ರಮ ಮನೆ ಮಾಡುತ್ತದೆ. ಕ್ರಿಸ್ಮಸ್ ಜೊತೆಗೆ ನವ ವರುಷದ ಉಲ್ಲಾಸವೂ ವೀಕ್ ಎಂಡ್ ಪಾರ್ಟಿ ಕೂಡ ಮುದ ನೀಡುವ ಖುಷಿಯ ಸಮಯವಾಗಿದ್ದು, ಈ ಬಾರಿಯಂತೂ ರಾತ್ರಿ ಕಪ್ರ್ಯೂ ಬಿದ್ದರೆ ಸರ್ವರ ಆಡಂಬರದ ಸಂಭ್ರಮಕ್ಕೂ ಒಂದು ಬ್ರೇಕ್ ಬೀಳುವುದಂತೂ ನಿಶ್ಚಿತ.
ಕೊರೊನಾದಿಂದ ಈ ಬಾರಿ ಕ್ರಿಸ್‍ಮಸ್ ಹಬ್ಬದ ಉತ್ಸಾಹ ಎಲ್ಲೆಡಯೂ ನೀರಸವಾಗಿದೆ. ಚರ್ಚುಗಳಲ್ಲಿ ಕೆಲವು ಯುವಕರು ಗೋದಲಿ ನಿರ್ಮಾಣ ಮಾಡುವುದು ಬಿಟ್ಟರೆ ಇತರೆ ಸಂಭ್ರಮ ಮಾಯವಾಗಿದೆ. ಡಿಸೆಂಬರ್‍ನಲ್ಲಿ ಕ್ರಿಸ್‍ಮಸ್ ಕೇರಲ್ಸ್ ಗೀತೆಗಳು ಎಲ್ಲೆಲ್ಲಿಯೂ ಗುಣುಗುಟ್ಟುತ್ತವೆ. ಆದರೆ ಈ ಬಾರಿ ಕೊರೊನಾ ಸೋಂಕು ಶುಭಾಷಯ ಕೋರುವ ಕ್ರಿಸ್‍ಮಸ್ ತಾತ ಸಾಂತಾ ಕ್ಲಾಸಾನಿಗಂತೂ ಕರಿನೆರಳಿನ ಛಾಯೆ ಆವರಿಸಿದ್ದು ಮಾತ್ರ ಶತ ಸತ್ಯ. ಕ್ರೈಸ್ತರ ಮನೆಗಳಿಗೆ ಬರಬೇಕಿದ್ದ ಸಾಂತಾ ಕ್ಲಾಸ್, ಬರುವ ವರ್ಷವಾದರೂ ಎಲ್ಲ ಕಷ್ಟ ಕಾರ್ಪಣ್ಯಗಳು ಮುಗಿದು ಸಂಭ್ರಮ ತರಲಿ ಎಂಬುದು ಸರ್ವರ ಆಶಯವಾಗಿದೆ.