ಮೂಡಿಗೆರೆ : ಕಾಡಾನೆ ದಾಳಿಗೆ ವ್ಯಕ್ತಿ ಬಲಿ…

85
firstsuddi

ಮೂಡಿಗೆರೆ : ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬರು ಬಲಿಯಾಗಿರುವ ಘಟನೆ ತಾಲೂಕಿನ ಹಾರ್ಗೋಡು ಗ್ರಾಮದಲ್ಲಿ ನಡೆದಿದೆ. ಆನಂದ್ ದೇವಾಡಿಗ(52) ಮೃತ ವ್ಯಕ್ತಿ. ಮೃತ ಆನಂದ್ ದೇವಾಡಿಗ ಮನೆಯ ಹಿಂಭಾಗದಲ್ಲಿ ಹಸು ಹುಡುಕಿಕೊಂಡು ಹೋದಾಗ ಈ ಘಟನೆ ಸಂಭವಿಸಿದೆ.

ದಾಳಿ ಮಾಡಿದ ಕಾಡಾನೆ ಸುಮಾರು ಸುಮಾರು ಒಂದು ಕಿ.ಮೀಗಿಂತಲೂ ಹೆಚ್ಚು ದೂರ ಮೃತ ದೇಹವನ್ನು ಎಳೆದೊಯ್ದಿರುವುದಾಗಿ ತಿಳಿದು ಬಂದಿದೆ. ಮೃತದೇಹ ಇರುವ ಜಾಗಕ್ಕೂ ಚಪ್ಪಲಿ ಇರುವ ಜಾಗಕ್ಕೂ ಸುಮಾರು ಒಂದು ಕಿ.ಮೀ ದೂರವಿದೆ. ಅಷ್ಟೆ ಅಲ್ಲದೆ ತಲೆ ಮೆದುಳು, ಮೂಳೆಯೂ ಒಂದೊಂದು ಜಾಗದಲ್ಲಿ ಬಿದ್ದಿದೆ. ಮೃತದೇಹವನ್ನು ಕಾಡಿನಲ್ಲಿ ಎಳೆದು ತಂದಿರುವುದರಿಂದ ಕಾಡಿನ ಮರಗಿಡಗಳಿಗೆ ಸಿಲುಕಿ ಮೃತದೇಹದ ಮೇಲೆ ಯಾವುದೇ ಬಟ್ಟೆ ಇಲ್ಲದಂತಾಗಿದೆ. ಛಿದ್ರವಾಗಿರುವ ಮೃತದೇಹವನ್ನು ಕಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ನಿನ್ನೆ ಸಂಜೆ ಈ ಘಟನೆ ನಡೆದರೂ ಬೆಳಗ್ಗೆವರೆಗೂ ಯಾರಿಗೂ ಮಾಹಿತಿ ಇರಲಿಲ್ಲ. ಮನೆಯವರು ಆನಂದ್ ಎಲ್ಲೋ ಹೋಗಿದ್ದಾರೆ, ಬರುತ್ತಾರೆ ಎಂದು ಸುಮ್ಮನಾಗಿದ್ದಾರೆ. ಆದರೆ, ಬೆಳಗ್ಗೆ ಆದರೂ ಮನೆಗೆ ಬಾರದೇ ಇದ್ದಾಗ ಸ್ಥಳೀಯರು ಎರಡು ಗುಂಪುಗಳಾಗಿ ಮನೆ ಹಿಂದಿನ ಕಾಡಿನಲ್ಲಿ ಹುಡುಕಾಡಿದ್ದಾರೆ. ಆಗ ಮೃತದೇಹ ಪತ್ತೆಯಾಗಿದೆ. ಬೆಳಗ್ಗೆ ಸ್ಥಳೀಯರು ಸ್ಥಳಕ್ಕೆ ಬರುವವರೆಗೂ ಆನೆ ಮೃತದೇಹವಿದ್ದ ಸ್ಥಳದಲ್ಲೇ ಇತ್ತಂತೆ. ಸ್ಥಳೀಯರು ಬಂದ ಬಳಿಕ ಆನೆ ಹೋಗಿದೆ.

ಕಳೆದೊಂದು ವಾರದಿಂದ 13 ಕಾಡಾನೆಗಳ ಹಿಂಡು ತಾಲೂಕಿನಾದ್ಯಂತ ಅಲ್ಲಲ್ಲೇ ದಾಂಧಲೆ ನಡೆಸುತ್ತಿವೆ. ಈ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಕೂಡ ಅಧಿಕಾರಿಗಳು ಏನೂ ಮಾಡುತ್ತಿಲ್ಲ ಎಂದು ಸ್ಥಳೀಯರು ಅರಣ್ಯ ಇಲಾಖೆ ವಿರುದ್ಧ ಅಸಮಾಧಾನ ಹೊರಹಾಕಿದ್ದು, ಕೂಡಲೇ ಆನೆಯನ್ನು ಸ್ಥಳಾಂತರಿಸಿ ಮೃತ ಆನಂದ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ. ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.