ಮೂಡಿಗೆರೆ: ಜಿಲ್ಲೆಯ ಇತರೆ ತಾಲ್ಲೂಕುಗಳಿಗೆ ಹೋಲಿಕೆ ಮಾಡಿದರೆ ಮೂಡಿಗೆರೆ ತಾಲ್ಲೂಕಿಗೆ ಅತೀ ಹೆಚ್ಚಿನ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಇಂದು ತಾಲ್ಲೂಕು ಪಂಚಾಯತಿ ಆವರಣದಲ್ಲಿರುವ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಸಭಾಂಗಣದಲ್ಲಿ ಕರೆದಿದ್ದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು. 2018 ರಿಂದ ಈಚೆಗೆ ತಾಲ್ಲೂಕಿನ ಅಭಿವೃದ್ಧಿ ಕಾರ್ಯಗಳಿಗೆ ರಾಜ್ಯ ಸರ್ಕಾರದಿಂದ ಅತೀ ಹೆಚ್ಚು ಅನುದಾನ ಬಿಡುಗಡೆಯಾಗಿದೆ. ಅತೀವೃಷ್ಟಿಗೆಂದೇ ನೂರಾರು ಕೋಟಿ ರೂ ಅನುದಾನ ಬಿಡುಗಡೆಯಾಗಿದೆ. ಕಾಮಗಾರಿಗಳ ಕಾರ್ಯ ಬಿರುಸಿನ ವೇಗದಲ್ಲಿಯೇ ನಡೆಯುತ್ತಿತ್ತು. ಆದರೆ ದುರದೃಷ್ಟವಶಾತ್ ಕೋರೊನಾ ಭೀತಿ ಎಲ್ಲಾ ಕಾರ್ಯಗಳಿಗೆ ಹಿನ್ನಡೆ ಉಂಟುಮಾಡುತ್ತಿದೆ. ಅತೀವೃಷ್ಟಿ, ಕುಡಿಯುವ ನೀರು, ರಸ್ತೆ, ಸೇತುವೆಗಳು, ಸಣ್ಣ ನೀರಾವರಿ, ಪುನರ್ವಸತಿ ಸೇರಿದಂತೆ ಹತ್ತು ಹಲವು ಯೋಜನೆಗಳಿಗೆ ನೂರಾರು ಕೋಟಿ ಹಣ ಬಿಡುಗಡೆಯಾಗಿದೆ. ಕೆಲವು ಯೋಜನೆಗಳು ಕಾರ್ಯರೂಪಕ್ಕೆ ಬಂದಿವೆ, ಇನ್ನುಳಿದ ಯೋಜನೆಗಳಿಗೆ ರೂಪುರೇಷೆ ಮುಗಿದಿದ್ದು ಶೀಘ್ರವೇ ಟೆಂಡರ್ ಕರೆಯಲಾಗುವುದು ಎಂದು ಮಾಹಿತಿ ನೀಡಿದರು.
ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಅವರು ಮಾತನಾಡಿ, ಅಧಿಕಾರಿಗಳು ಮಂದಗತಿಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಜನ ಸಾಮಾನ್ಯರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಮಾನವೀಯ ನೆಲೆಗಟ್ಟಿನಲ್ಲಿ ಕಾರ್ಯ ನಿರ್ವಹಿಸಿ ಎಂದು ಅಧಿಕಾರಿಗಳಿ ತಾಕೀತು ಮಾಡಿದರು. ಸ್ಥಳೀಯವಾಗಿ ಇರುವ ಸಮಸ್ಯೆಗಳ ಮೂಲವನ್ನು ಹುಡುಕಿ ಅರ್ಥ ಮಾಡಿಕೊಂಡು ಮೇಲಾಧಿಕಾರಿಗಳಿಗೆ ಹಾಗೂ ಸರ್ಕಾರಕ್ಕೆ ವರದಿ ಸಲ್ಲಿಸಿ. ಕಲ್ಪನಾ ಲೋಕದಿಂದ ಹೊರ ಬಂದು ವಾಸ್ತವತೆಯನ್ನು ಅರ್ಥ ಮಾಡಿಕೊಳ್ಳಿ. ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಾ, ಪ್ರತೀ ನಿತ್ಯ ದಿನ ನೂಕುಲು ಕಷ್ಟ ಪಡುತ್ತಿರುವಂಥಹ ಅದೆಷ್ಟೋ ಕುಟುಂಬಗಳಿವೆ, ಮೊಂಡುತನ, ಸೋಮಾರಿತನ ಬಿಟ್ಟು ಕೆಲಸ ನಿರ್ವಹಿಸಿ ಎಂದು ತಾಲ್ಲೂಕು ಕಛೇರಿ ಅಧಿಕಾರಿಯೋರ್ವರಿಗೆ ಚಾಟಿ ಬೀಸಿದರು.
ಮೂಡಿಗೆರೆ ತಹಶೀಲ್ದಾರ್ ಹೆಚ್.ಎಂ.ರಮೇಶ್ ಅವರು ಅತೀವೃಷ್ಟಿಯಲ್ಲಿ ನಿರಾಶ್ರಿತರಾದವರಿಗೆ ಬಣಕಲ್ ಗ್ರಾಮದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ವಸತಿ ನಿಲಯಗಳ ಬಗ್ಗೆ ಮಾಹಿತಿ ನೀಡಿದರು. ಒಟ್ಟು 369 ಮನೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಇವುಗಳಲ್ಲಿ 165 ಮನೆಗಳ ನಿರ್ಮಾಣ ಕಾರ್ಯ ಆರಂಭವಾಗಿದ್ದು, 18 ಪೂರ್ಣಗೊಂಡಿವೆ, 26 ಮನೆಗಳು ರೂಫ್ ಮಟ್ಟದಲ್ಲಿವೆ, 30 ಮನೆಗಳು ಲಿಂಟಲ್ ಲೆವೆಲ್ ನಲ್ಲಿದ್ದರೆ, 85 ಮನೆಗಳ ಅಡಿಪಾಯ ಕಾಮಗಾರಿ ಪ್ರಗತಿಯಲ್ಲಿದೆ. ಬಾಕಿ ಉಳಿದ 130 ಮನೆಗಳ ನಿರಾಶ್ರಿತರು ಬೇರೆಡೆ ಜಾಗ ಕೇಳಿರುವುದರಿಂದ ಮನೆಗಳ ನಿರ್ಮಾಣ ಕಾರ್ಯವನ್ನು ಕೈಬಿಡಲು ನಿರ್ಧರಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿ.ಪಂ.ಸದಸ್ಯರುಗಳಾದ ಬಣಕಲ್ ಶ್ಯಾಮಣ್ಣ ಹಾಗು ಬಿ.ಎಲ್.ದೇವರಾಜ್ ಅವರುಗಳು ವಿವಿಧ ಅನುದಾನ ಬಿಡುಗಡೆಯಾಗದಿರುವುದು, ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳನ್ನು ನಿರ್ಲಕ್ಷಿಸುತ್ತಿರುದು, ಸ್ಥಳೀಯ ಸಮಸ್ಯೆಗಳ ಬಗ್ಗೆ ಪ್ರಸ್ತಾಪ ಮಾಡುತ್ತ ಸಭೆಯ ಗಮನ ಸೆಳೆದರು. ಸಭೆಯಲ್ಲಿ ತಾ.ಪಂ.ಉಪಾಧ್ಯಕ್ಷೆ ಪ್ರಮೀಳ, ತಾ.ಪಂ.ಕಾರ್ಯನಿರ್ವಹಣಾ ಅಧಿಕಾರಿ ಎಂ.ವಿ.ವೆಂಕಟೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.










