ಕೊಟ್ಟಿಗೆಹಾರ : ಸಾರಿಗೆ ನೌಕರರ ಮುಷ್ಕರದ ಬಿಸಿ ಲಕ್ಷ ದೀಪೋತ್ಸವಕ್ಕೆ ಧರ್ಮಸ್ಥಳಕ್ಕೆ ಆಗಮಿಸುವ ಭಕ್ತಾಧಿಗಳಿಗೂ ತಟ್ಟಿದ್ದು, ಬಸ್ ಸಂಚಾರ ಇಲ್ಲದೆ ಪ್ರಯಾಣಿಕರು ಪರದಾಡುವಂತಾಯಿತು.
ಧರ್ಮಸ್ಥಳದಲ್ಲಿ ಈ ತಿಂಗಳ 10 ರಿಂದ 14 ರವರೆಗೆ ಲಕ್ಷ ದೀಪೋತ್ಸವ ನಡೆಯಲಿದ್ದು ಶ್ರೀ ಮಂಜುನಾಥಸ್ವಾಮಿಯ ಹೊಸಕಟ್ಟೆ ಉತ್ಸದೊಂದಿಗೆ ಲಕ್ಷದೀಪೋತ್ಸ ಆರಂಭಗೊಂಡು ಗೌರಿಮಾರುಕಟ್ಟೆ ಉತ್ಸವದೊಂದಿಗೆ ಸಂಪನ್ನಗೊಳ್ಳಲಿದೆ.
ಕರೊನಾ ಹಿನ್ನಲೆಯಲ್ಲಿ ಸುರಕ್ಷತಾ ದೃಷ್ಟಿಯಿಂದ ಲಕ್ಷದೀಪೋತ್ಸವದ ಕಾರ್ಯಕ್ರಮಗಳನ್ನು ಭಕ್ತರು ಮನೆಯಲ್ಲೆ ಕುಳಿತು ಉತ್ಸವವನ್ನು ನೋಡಬೇಕು ಎಂದು ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಅವರು ಮನವಿ ಮಾಡಿಕೊಂಡಿದ್ದರು. ಆದರೂ ಕೂಡ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಲಕ್ಷದೀಪೋತ್ಸವಕ್ಕೆ ಹೊರಟ್ಟಿದ್ದಾರೆ. ಸಾರಿಗೆ ನೌಕರರ ಮುಷ್ಕರದಿಂದಾಗಿ ಕೊಟ್ಟಿಗೆಹಾರ, ಚಾರ್ಮಾಡಿ ಮಾರ್ಗವಾಗಿ ಉಜಿರೆ, ಧರ್ಮಸ್ಥಳ ಕಡೆಗೆ ಸಾಗುವ ಬಸ್‍ಗಳು ಇಲ್ಲದೇ ಇರುವುದರಿಂದ ಕೊಟ್ಟಿಗೆಹಾರದಲ್ಲಿ ಪ್ರಯಾಣಿಕರು ಕಾದು ನಿಂತಿರುವ ದೃಶ್ಯ ಕಂಡು ಬಂತು.
ಬಸ್ ಮುಷ್ಕರದ ಲಾಭ ಪಡೆದ ಜೀಪು ಮುಂತಾದ ಖಾಸಗಿ ವಾಹನಗಳು ಧರ್ಮಸ್ಥಳಕ್ಕೆ ಪ್ರಯಾಣಿಕರನ್ನು ಕರೆದುಕೊಂಡು ಹೋದರೂ ಕೂಡ ಬೆರಳೆಣಿಕೆಯ ಖಾಸಗಿ ವಾಹನಗಳು ಇದ್ದುದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು.
ಇಂದು ಲಕ್ಷದೀಪೋತ್ಸವದ ಕಡೆಯ ದಿನವಾಗಿದ್ದು ಮೂಡಿಗೆರ, ಬಣಕಲ್, ಕೊಟ್ಟಿಗೆಹಾರ ಸುತ್ತಮುತ್ತಲಾ ಸ್ಥಳೀಯರು ಬಸ್ ಇಲ್ಲದೇ ಇರುವುದರಿಂದ ಖಾಸಗಿ ಹಾಗೂ ಸ್ವಂತ ವಾಹನಗಳಲ್ಲಿ ಧರ್ಮಸ್ಥಳದ ಕಡೆಗೆ ಸಾಗಿದರು.
ಪ್ರತಿವರ್ಷ ಕೊಟ್ಟಿಗೆಹಾರದ ಅಂಗಡಿ ಹೋಟೆಲ್‍ಗಳ ವರ್ತಕರು ಧರ್ಮಸ್ಥಳ ಲಕ್ಷದೀಪೋತ್ಸವಕ್ಕೆ ಬರುವ ಪ್ರಯಾಣಿಕರನ್ನೆ ಅವಲಂಭಿಸಿ ಈ ಸಂಧರ್ಭದಲ್ಲಿ ಉತ್ತಮ ವ್ಯಾಪಾರ ಮಾಡುತ್ತಿದ್ದರು. ಮುಷ್ಕರದಿಂದಾಗಿ ಪ್ರಯಾಣಿಕರಿಲ್ಲದೇ ವ್ಯಾಪಾರವೂ ಕಡಿಮೆಯಾಗಿದೆ.










