ಮೂಡಿಗೆರೆ : ನೆರೆ ಸಂತ್ರಸ್ತರಿಗೆ ಶೀಘ್ರ ಪುನರ್ವಸತಿ ಹಾಗೂ ಇತರ ಸೌಲಭ್ಯಗಳನ್ನು ಕಲ್ಪಿಸುವಂತೆ ಸಿಪಿಐ ನಿಂದ ಉಪತಹಶೀಲ್ದಾರ್‍ಗೆ ಮನವಿ…

349
firstsuddi

ಬಣಕಲ್ : ನೆರೆ ಸಂತ್ರಸ್ತರಿಗೆ ಪುನರ್ವಸತಿ ಹಾಗೂ ಇತರ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಸಿಪಿಐ ವತಿಯಿಂದ ಜಾವಳಿ ನಾಡಕಚೇರಿಯಲ್ಲಿ ಉಪ ತಹಶೀಲ್ದಾರ್ ಸೋಮಶೇಖರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಸಿಪಿಐನ ಬಾಳೂರು ಘಟಕದ ಕಾರ್ಯದರ್ಶಿ ಸುಂದರ್ ಬಾಳೂರು ಮಾತನಾಡಿ ನೆರೆ ಸಂತ್ರಸ್ತ ಕುಟುಂಬಗಳಿಗೆ ಮುಂದಿನ ಮಳೆಗಾಲದ ಒಳಗೆ ಪುನರ್ವಸತಿ ಕಲ್ಪಿಸುವ ಅಗತ್ಯವಿದೆ. ಸರ್ಕಾರ ಪರ್ಯಾಯ ಜಾಗ ಗುರುತಿಸಿರುವ ಬಗ್ಗೆ ನೆರೆ ಸಂತ್ರಸ್ತರಿಗೆ ಸರಿಯಾದ ಮಾಹಿತಿ ನೀಡಿಲ್ಲ. ನೆರೆ ಸಂತ್ರಸ್ತರು ತಮಗೆ ಯಾವ ಪ್ರದೇಶದಲ್ಲಿ ಪರ್ಯಾಯ ಜಾಗ ಸಿಗಬಹುದು ಎಂದು ತಿಳಿಯದೆ ಗೊಂದಲದಲ್ಲಿದ್ದಾರೆ. ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಬಂದು ಜನಸಂಪರ್ಕ ಸಭೆ ನಡೆಸಿ ಪುನರ್ವಸತಿಯ ಬಗ್ಗೆ ಗೊಂದಲಕ್ಕೆ ತೆರೆ ಎಳೆಯಬೇಕು ಹಾಗೂ ಪುನರ್ವಸತಿ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಸಿಪಿಐ ಸಹ ಕಾರ್ಯದರ್ಶಿ ಲೋಕೇಶ್ ಕಲ್ಮನೆ ಮಾತನಾಡಿ ಈಗಾಗಲೇ ದೇಶದ ಆರ್ಥಿಕ ಪರಿಸ್ಥಿತಿಯ ಹಿನ್ನಡೆಯಿಂದ ಕಾಫಿ ಬೆಲೆ ಕುಸಿತ ಕಂಡಿದ್ದು ಮಲೆನಾಡಿನ ಮುಖ್ಯ ಕಾಫಿ ಉದ್ಯಮ ನೆಲಕಚ್ಚಿದೆ. ಕಾಫಿ ಉದ್ಯಮವನ್ನು ಪುನಶ್ಚೇತನಗೊಳಿಸಲು ರಾಜ್ಯ ಹಾಗು ಕೇಂದ್ರ ಸರ್ಕಾರಗಳು ಕ್ರಮಕ್ಕೆ ಮುಂದಾಗಬೇಕು. ಈಗಾಗಲೇ ಹಲವಾರು ಪ್ರದೇಶಗಳಲ್ಲಿ ಒತ್ತುವರಿ ಪ್ರದೇಶಗಳನ್ನು ತೆರವುಗೊಳಿಸಿದ್ದು ಆ ಪ್ರದೇಶಗಳನ್ನು ಕಾಫಿ ತೋಟದ ಕೆಲಸಗಾರರಿಗೂ ಹಾಗೂ ನಿವೇಶನ ರಹಿತರಿಗೂ ವಿತರಿಸಲು ಸರ್ಕಾರ ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಎಐವೈಎಫ್ ತಾಲ್ಲೂಕು ಅಧ್ಯಕ್ಷ ರವಿ ಸುಂಕಸಾಲೆ, ಸಿಪಿಐ ಸಹಕಾರ್ಯದರ್ಶಿ ಸುಂದರ್ ಕೆಳಗೂರು, ಹಾಗೂ ಸಿಪಿಐನ ಪದಾಧಿಕಾರಿಗಳು ಇದ್ದರು.