ಕಳಸ : ಮಲೆನಾಡು ಭಾಗಗಳಲ್ಲಿ ಮಳೆ ಹೆಚ್ಚಾಗಿದ್ದು, ತಾಲ್ಲೂಕಿನ ಸುತ್ತ ಮುತ್ತ ನಿನ್ನೆ ಆರಂಭವಾದ ಮಳೆ ಇಂದೂ ಕೂಡಾ ಮುಂದುವರೆದಿದ್ದು, ಭದ್ರಾ ನದಿ ಮೈದುಂಬಿ ಹರಿಯುತ್ತಿದೆ.
ನಿನ್ನೆ ರಾತ್ರಿಯಿಂದ ಆರಂಭವಾದ ಮಳೆ ಎಡಬಿಡದೆ ಸುರಿಯುತ್ತಿರುವುದರಿಂದ ಭದ್ರಾ ನದಿಯ ನೀರಿನ ಮಟ್ಟ ಹೆಚ್ಚಾಗಿ ಕಳಸ-ಹೊರನಾಡು ಮದ್ಯೆ ಬರುವ ಹೆಬ್ಬಾಳೆ ಸೇತುವೆ ಮುಳುಗುವ ಹಂತಕ್ಕೆ ತಲುಪಿದೆ. ಅಲ್ಲದೆ ಸೋಮಾವತಿ ನದಿಯೂ ಕೂಡಾ ಮೈ ದುಂಬಿ ಹರಿಯುತ್ತಿದೆ.
ಸುರಿಯುತ್ತಿರುವ ಮಳೆಯಿಂದ ಕಳೆದ ಬಾರಿ ಭೂ ಕುಸಿತವಾದ ಪ್ರದೇಶಗಳಲ್ಲಿ ದರೆ ಕುಸಿಯಲು ಪ್ರಾರಂಭವಾಗಿದ್ದು, ನದಿ ಪ್ರದೇಶದ ತಗ್ಗು ಪ್ರದೇಶಗಳು ನೀರಿನಿಂದ ಜಲಾವೃತಗೊಂಡಿದೆ.
ಕಳಸ ಕೆ.ಎಂ.ರಸ್ತೆಯ ಬಿಳಗೋಡು ಎಂಬಲ್ಲಿ ಗುಡ್ಡವೊಂದು ಕುಸಿಯುತ್ತಾ ಬಂದಿದ್ದು, ಇದೇ ರೀತಿ ಮುಂದುವರೆದಲ್ಲಿ ಕಳಸ-ಕುದುರೆಮುಖ ರಸ್ತೆ ಕಡಿತವಾಗುವ ಆತಂಕ ಎದುರಾಗಿದೆ. ಚನ್ನಡ್ಲು ಬಾಗಗಳಲ್ಲಿ ದರೆಗಳು ರಸ್ತೆಗೆ ಜಾರುತ್ತಿರುವುದು ಕಂಡು ಬರುತ್ತಿದೆ. ಕಳೆದ ಬಾರಿ ಭೂ ಕುಸಿತವಾದ ಸ್ಥಳಗಳಲ್ಲಿ ನೀರು ಸರಿಯಾಗಿ ಹರಿದು ಹೋಗಲು ಚರಂಡಿಗಳನ್ನು ಮಾಡದಿರುವ ಹಿನ್ನಲೆಯಲ್ಲಿ ಈ ಬಾರಿ ಮತ್ತಷ್ಟು ಸಮಸ್ಯೆಗಳನ್ನು ಎದುರಿಸುವಂತಾಗಿದೆ.










