ಕೊಟ್ಟಿಗೆಹಾರ : ಬಾಳೂರು ಹೋಬಳಿಯ ಜಾವಳಿಯ ಮಲೆಮನೆ ರಸ್ತೆ ದುರಸ್ತಿ ಕಾಣದೇ ಕೆಸರುಮಯವಾಗಿ ಸಂಪೂರ್ಣ ಹದಗೆಟ್ಟಿದ್ದು ಅವ್ಯವಸ್ಥೆಯ ಆಗರವಾಗಿದ್ದು ದುರಸ್ಥಿ ಮಾಡಬೇಕು ಎಂದು ಮಲೆಮನೆ ಗ್ರಾಮಸ್ಥರು ಆಗ್ರಹಿಸಿದ್ದಾರೆ
ಮಲೆಮನೆ ಗ್ರಾಮಸ್ಥ ಅಶ್ವತ್ ಮಾತನಾಡಿ 15 ವರ್ಷದ ಹಿಂದೆ ಹಾಕಿದ್ದ ಡಾಂಬಾರು ಕಿತ್ತು ಹೋಗಿದ್ದು ಸುಮಾರು 8 ಕಿ.ಮೀ ವರೆಗೂ ರಸ್ತೆ ಹಾಳಾಗಿದೆ. ವಾಹನ ಸವಾರರ ಪಾದಚಾರಿಗಳು ಸಂಚರಿಸಲು ಪರದಾಡುವಂತಾಗಿದೆ. ಕಳೆದ ವರ್ಷದ ಮಳೆಗಾಲದಲ್ಲಿ ನೆರೆಪ್ರವಾಹದಿಂದ ಮಲೆಮನೆ ಗ್ರಾಮದಲ್ಲಿ ಕೆಲ ಮನೆಗಳು ನೆಲಸಮವಾದಾಗ ಮುಖ್ಯಮಂತ್ರಿಗಳು ಸೇರಿದಂತೆ ರಾಜ್ಯಮಟ್ಟದ ಜನಪ್ರತಿನಿಧಿಗಳು ಗ್ರಾಮಕ್ಕೆ ಬಂದಿದ್ದರೂ ಕೂಡ ಗ್ರಾಮಕ್ಕೆ ಸಾಗುವ ರಸ್ತೆ ದುರಸ್ಥಿಯಾಗಿಲ್ಲ ಎಂದರು.
ಮಲೆಮನೆ ಗ್ರಾಮಸ್ಥ ಮಹೇಶ್ ಮಾತನಾಡಿ, ಮಲೆಮನೆ,ಮೇಗೂರು ಗ್ರಾಮದಲ್ಲಿ ತುಂಬಾ ಮನೆಗಳಿದ್ದು ಹೆಚ್ಚಿನವರು ರೈತಾಫಿ ವರ್ಗದವರಾಗಿದ್ದಾರೆ. ಕಳೆದ ವರ್ಷ ಗ್ರಾಮದ ಜನರು ಗುಂಡಿ ಮುಚ್ಚಿ ರಸ್ತೆ ತಾತ್ಕಾಲಿಕವಾಗಿ ಸರಿಪಡಿಸಿದ್ದರು. ಆದರೆ ಮಲೆಮನೆ ರಸ್ತೆಯ ಗೋಳು ಕೇಳುವವರೇ ಇಲ್ಲದಂತಾಗಿದೆ ಮಲೆಮನೆ ಭಾಗದ ರಸ್ತೆ ನೀರಿನ ತೇವಾಂಶದಿಂದ ಕೂಡಿರುವುದರಿಂದ ಡಾಂಬಾರು ಹಾಕಿದರೆ ಕಿತ್ತು ಹೋಗುತ್ತದೆ. ಇನ್ನು ಮಳೆಗಾಲದಲ್ಲಂತೂ ಶಾಲಾ ಮಕ್ಕಳು ಕೂಡ ನಡೆದುಕೊಂಡು ಹೋಗಲು ಸಾಧ್ಯವಿಲ್ಲ. ಕೃಷಿ ಚಟುವಟಿಕೆಗಳಿಗೂ ತುಂಬಾ ಅಡಚಣೆಯಾಗಿದೆ. ರಸ್ತೆ ಸಂಪೂರ್ಣ ಕೆಸರು ಗದ್ದೆಯಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು ಮಲೆಮನೆ ರಸ್ತೆ ದುರಸ್ತಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.










