ಮೂಡಿಗೆರೆ : ಜನಪದ ಸಂಸ್ಕೃತಿಯಲ್ಲಿ ಜೀವನದ ಸಾರ ಅಡಗಿದೆ ಎಂದು ಮೂಡಿಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್ ಅವರು ಹೇಳಿದರು.
ಅವರು ಬಣಕಲ್ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಯುವ ಜನತೆಗೆ ಜಾನಪದ ಸಂಸ್ಕೃತಿ ಬದುಕಿಗೆ ನಾಂದಿಯಾಗಿದೆ ಎಂಬುದು ಅರ್ಥವಾಗದೇ ಸಂಸ್ಕೃತಿ ಮರೆಯಾಗುತ್ತಿರುವುದು ವಿಪರ್ಯಾಸವಾಗಿದೆ. ಅರ್ಥಬದ್ದವಾದ ಜಾನಪದ ಸೊಗಡು ಜೀವನದಲ್ಲಿ ನಡೆಯುವ ಪ್ರತಿಯೊಂದು ಏಳುಬೀಳುಗಳನ್ನು ಹಾಡುಗಳ ಮೂಲಕ, ಕಥೆಗಳ ಮೂಲಕ ಪೋಣಿಸಿ ಉತ್ತಮ ಸಂಸ್ಕೃತಿ ರೂಪಿಸುವಲ್ಲಿ ಸಾಧ್ಯವಾಗಿದೆ. ಜಾನಪದ ಸಂಸ್ಕೃತಿ ಏಕತೆಯ ಹಾಗೂ ಭಾಂದವ್ಯದ ಬೆಸುಗೆಯಾಗಿದೆ ಎಂದರು.
ಕನ್ನಡ ಜಾನಪದ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಬಕ್ಕಿ ಮಂಜುನಾಥ್ ಮಾತನಾಡಿ, ಮಾನವನ ದೈನಂದಿನ ಬದುಕು ಆರಂಭವಾಗುವುದೇ ಜನಪದದಿಂದ ಆಗಿದೆ. ಮನುಷ್ಯನನ್ನು ನಾಗರೀಕತೆಯತ್ತ ಕೊಂಡೊಯ್ಯುವುದೇ ಜಾನಪದ ಸಾಧನವಾಗಿದೆ. ಎಲ್ಲ ಸಾಹಿತ್ಯದ ಬೇರು ಜಾನಪದವಾಗಿದ್ದು, ಆ ಸಂಸ್ಕೃತಿಯನ್ನು ಉಳಿಸಲು ಶಾಲಾ ಕಾಲೇಜುಗಳು ಮುಂದಾಗಬೇಕು. ಜನಪದವು ಜನರ ನೋವು ನಲಿವುಗಳನ್ನು ಆಚಾರ ವಿಚಾರಗಳನ್ನು ತಮ್ಮ ಹಾಡುಗಳ ಮುಖೇನ ಕಟ್ಟಿಕೊಟ್ಟಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಜಾನಪದ ಹಾಡುಗಳ ಬಳಕೆಯು ವಿರೂಪವಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ಪ್ರೇಮ್‍ಸಾಗರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಬ್ಲಿದೇವರಾಜ್ ವಹಿಸಿದ್ದರು. ಬಕ್ಕಿಮಂಜು ಅವರತಂಡ ವಿವಿಧ ಜಾನಪದ ಹಾಸ್ಯ ಗೀತೆಗಳನ್ನು ಹಾಡಿ ವಿದ್ಯಾರ್ಥಿಗಳಿಗೆ ಜಾನಪದ ಹಾಡುಗಳ ಸೊಗಡಿನ ರುಚಿ ಉಣಬಡಿಸಿದರು. ಕಾರ್ಯಕ್ರಮದಲ್ಲಿ ಜಾನಪದ ಪರಿಷತ್‍ನ ಹೋಬಳಿ ಕಾರ್ಯಧರ್ಶಿ ಲೋಕೇಶ್ ಬೆಟ್ಟಗೆರೆ, ಪಿ.ಕೆ.ಮಂಜುನಾಥ್, ಧನುಷ್, ಸಂತೋಷ್, ನಂದೀಶ್ ಬಂಕೇನಹಳ್ಳಿ, ಕಣಚೂರು ನವೀನ್, ಶಿಕ್ಷಕ ವಸಂತ್ ಹಾರ್‍ಗೋಡು ಇದ್ದರು. ಕಾರ್ಯಕ್ರಮದಲ್ಲಿ ವಸಂತ್ ಸ್ವಾಗತಿಸಿ, ಮಲ್ಲಿಕಾರ್ಜುನ್ ವಂದಿಸಿದರು.
Home ಸ್ಥಳಿಯ ಸುದ್ದಿ ಮೂಡಿಗೆರೆ : ಯುವ ಜನತೆಗೆ ಜಾನಪದ ಸಂಸ್ಕೃತಿ ಬದುಕಿಗೆ ನಾಂದಿಯಾಗಿದೆ ಎಂಬುದು ಅರ್ಥವಾಗದೇ ಸಂಸ್ಕೃತಿ ಮರೆಯಾಗುತ್ತಿರುವುದು...










