ಮೂಡಿಗೆರೆ : ಸೇನೆಗೆ ಅಯ್ಕೆಯಾದ ಯುವಕ ಸುಪ್ರೀತ್ ಗೆ ಪೊಲೀಸ್ ಠಾಣೆಯಲ್ಲಿ ಅಭಿನಂದನೆ…

2618
firstsuddi

ಮೂಡಿಗೆರೆ : ಬಾಳೆಹಳ್ಳಿ ಗ್ರಾಮದ ಗಣೇಶ್ ಮತ್ತು ಅನಿತಾ ದಂಪತಿಯ ಪುತ್ರ ಸುಪ್ರೀತ್(22) ಅವರು ಸೇನೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಮೂಡಿಗೆರೆ ಪೊಲೀಸ್ ಠಾಣೆಯ ಸಿಬ್ಬಂದಿಗಳು, ಸ್ಥಳೀಯರು ಹಾಗೂ ಸ್ನೇಹಿತರು ಮೂಡಿಗೆರೆ ಠಾಣೆಯಲ್ಲಿ ಅಭಿನಂದಿಸಿದರು.
ಗ್ರಾಮದ ಯುವಕ ಸೇನೆಗೆ ಆಯ್ಕೆಯಾದ ಸುದ್ದಿ ತಿಳಿಯುತ್ತಿದ್ದಂತೆ ಸಾರ್ವಜನಿಕವಾಗಿ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಿ ಯುವಕರಿಗೆ ಸ್ಪೂರ್ತಿ ತುಂಬುವ ಯೋಜನೆ ಸುಪ್ರೀತ್ ಅವರ ಸ್ನೇಹಿತರು ಹಾಗೂ ಸ್ಥಳೀಯರಿಗೆ ಇತ್ತು. ಆದರೆ ಕೆಲವು ಸ್ನೇಹಿತರು ಘನತೆಯುಳ್ಳ ಸೇವೆಗೆ ತಮ್ಮ ಸ್ನೇಹಿತ ಆಯ್ಕೆಯಾಗಿರುವುದರಿಂದ ಅರ್ಥಪೂರ್ಣವಾಗಿ ಪೊಲೀಸ್ ಠಾಣೆಯಲ್ಲಿ ಅಭಿನಂದನೆ ಕಾರ್ಯಕ್ರಮವನ್ನು ಆಯೋಜಿಸೋಣ ಎಂದು ಠಾಣಾಧಿಕಾರಿ ರವಿ ಅವರಿಗೆ ತಿಳಿಸಲಾಗಿತ್ತು. ಇದಕ್ಕೆ ಪೂರಕವಾಗಿ ಸ್ಪಂಧಿಸಿದ ಠಾಣಾಧಿಕಾರಿ ರವಿ ಅವರು ಪೊಲೀಸ್ ಠಾಣೆಯಲ್ಲಿ ಸುಪ್ರೀತ್ ಅವರನ್ನು ಸಾರ್ವಜನಿಕರ ಎದುರಿನಲ್ಲಿ ಸನ್ಮಾನಿಸಿ ಅಭಿನಂದಿಸಿದರು.
ನಂತರ ಮಾತನಾಡಿದ ರವಿ ಅವರು. ಸೇನೆಗೆ ಸೇರಿ ದೇಶ ಸೇವೆ ಮಾಡಲು ಬಹುತೇಕ ಯುವಕರಿಗೆ ಆಸೆ ಇರುತ್ತದೆ. ಆದರೆ ಕಾರಣಾಂತರಗಳಿಂದ ಈ ಕಾರ್ಯ ನೆರವೇರದೆ ನಿರಾಶೆ ಹೊಂದಿರುತ್ತಾರೆ. ನನಗೂ ಕೂಡ ಸೇನೆಗೆ ಸೇರಬೇಕು ಎನ್ನುವ ಆಸೆ ಇತ್ತು ಆದರೆ ಪೋಲೀಸ್ ಇಲಾಖೆಗೆ ಸೇರ್ಪಡೆಗೊಳ್ಳುವ ಅವಕಾಶ ಮಾತ್ರ ಸಿಕ್ಕಿತು. ಸ್ಥಳೀಯವಾಗಿ ಹೆಚ್ಚು ಹೆಚ್ಚು ಯುವಕರು ಸೇನೆಗೆ ಸೇರುವ ಗುರಿ ಹೊಂದಬೇಕು. ಸೇನೆಗೆ ಸೇರಲು ಹಲವಾರು ಭಿಗಿ ಕಟ್ಟುಪಾಡುಗಳಿವೆ. ಎಲ್ಲವನ್ನು ದಾಟಿ ಸೇನೆಯ ಒಳಗೆ ಸೇರುವುದು ದೊಡ್ಡ ಸಾಹಸವೇ ಸರಿ. ಇಂಥಹ ಸಾಧನೆ ಮಾಡಿರುವ ಯುವಕನನ್ನು ಅಭಿನಂದಿಸುವುದು ನಮ್ಮೆಲ್ಲರ ಹೆಮ್ಮೆ. ಎಲ್ಲವನ್ನೂ ಬಿಟ್ಟು ದೇಶ ಸೇವೆಗೆ ಹೊರಟು ನಿಂತಿರುವ ಸುಪ್ರೀತ್ ಅವರ ಕಾರ್ಯಗಳಲ್ಲಿ ಯಶಸ್ಸು ಸಿಗಲಿ ಎಂದು ಹಾರೈಸೋಣ ಎಂದರು.
ಅಭಿನಂದನಾ ಕಾರ್ಯಕ್ರಮದಲ್ಲಿ ಸುಪ್ರೀತ್ ಅವರ ಕುಟುಂಬ ಹಾಗೂ ಗ್ರಾಮಸ್ಥರು ಸೇರಿದಂತೆ ಸ್ಥಳೀಯರಾದ ಪ್ರವೀಣ್ ಪೂಜಾರಿ, ಧರ್ಮಪಾಲ್, ಜೇನು ಬೈಲು ಅಜಿತ್ ಮತ್ತು ಮೂಡಿಗೆರೆ ಠಾಣೆಯ ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.