ಮೂಡಿಗೆರೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಮೂಡಿಗೆರೆ ಕಸಬಾ ವಲಯ ಹಾಗೂ ಶಿವಗಿರಿ ಸೇವಕರ ಸಂಘದ ಸಹಭಾಗಿತ್ವದಲ್ಲಿ ಹಿಂದೂ ರುದ್ರಭೂಮಿ ಸ್ವಚ್ಛತಾ ಶ್ರಮದಾನ ನಡೆಸಲಾಯಿತು.
ಹೆಸಗಲ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಿಂದೂ ರುದ್ರಭೂಮಿಯು ಸೂಕ್ತ ನಿರ್ವಹಣೆ ಇಲ್ಲದೆ ಗಿಡಗಂಟಿಗಳು ಬೆಳೆದಿದ್ದರಿಂದ ಶವ ಸಂಸ್ಕಾರ ಕಾರ್ಯ ನಡೆಸಲು ಕಷ್ಟಕರವಾಗುತ್ತಿತ್ತು. ಎಲ್ಲೆಂದರಲ್ಲಿ ಬೆಳೆದು ನಿಂತಿದ್ದ ಗಿಡ ಗಂಟಿಗಳು, ಕಸದ ರಾಶಿಗಳ ಸರಿಯಾದ ರೀತಿಯಲ್ಲಿ ವಿಲೇವಾರಿ ಆಗದೆ ಗಬ್ಬು ನಾರುತ್ತಿದ್ದುದನ್ನು ಗಮನಿಸಿದ ಸ್ವಯಂ ಸೇವಕರು ಸೋಮವಾರದಂದು ಸ್ವಯಂ ಪ್ರೇರಿತರಾಗಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದರು. ಇದಲ್ಲದೆ ರುದ್ರಭೂಮಿಯಲ್ಲಿ ಇರುವ ಶವ ದಹನ ಛೇಂಬರ್ ಕೂಡ ತಕ್ಕು ಹಿಡಿಯುವ ಸ್ಥಿತಿಯಲ್ಲಿದ್ದು ಅದನ್ನೂ ಕೂಡ ಸ್ವಚ್ಛಗೊಳಿಸಲಾಯಿತು. ಸ್ವಚ್ಛತಾ ಕಾರ್ಯದ ಬಳಿಕ ಸಂಗ್ರಹಿಸಲಾದ ಕಸವನ್ನು ಪಂಚಾಯತಿಯ ಕಸದ ವಾಹನದಲ್ಲಿ ತುಂಬಿಸಿ ವಿಲೇವಾರಿ ಮಾಡಲಾಯಿತು.
ಈ ಸಂದರ್ಭದಲ್ಲಿ ಮೂಡಿಗೆರೆ ತಾಲ್ಲೂಕಿನ ಯೋಜನಾಧಿಕಾರಿ ಸುರೇಂದ್ರ ಕುಮಾರ್, ವಿಪತ್ತು ನಿರ್ವಹಣಾ ಸಂಯೋಜಕ ಪ್ರವೀಣ್ ಪೂಜಾರಿ, ವಲಯ ಮೇಲ್ವಿಚಾರಕ ವಿಘ್ನೇಶ್, ಗ್ರಾ.ಪಂ. ಸದಸ್ಯರುಗಳಾದ ಶಿವಣ್ಣ ಹಾಗೂ ಅಶೋಕ್, ರವಿ ಪೂಜಾರಿ ಕೆಲ್ಲೂರು, ರಘು ಗೌಡ, ಅಶ್ವಿನ್, ಹರೀಶ್, ಸುರೇಶ್, ಸಂತೋಷ್, ಪ್ರಕಾಶ್, ಪ್ರತಾಪ್, ಸೇವಾಪ್ರತಿನಿಧಿಗಳಾದ ಸುಜಾತ, ಮಧು ಹಾಗೂ ಸುದೀಪ್ ಉಪಸ್ಥಿತರಿದ್ದರು.










