ಮೂಲ ಸೌಕರ್ಯಗಳನ್ನು ನೀಡುವುದಿಲ್ಲ ಎಂದು ಹೆದರಿಸುವುದು ಅಕ್ರಮ : ಡಿ.ಕೆ.ಶಿವಕುಮಾರ್.

81
firstsuddi

ಚಾಮರಾಜನಗರ : ಲಸಿಕಾ ಅಭಿಯಾನಕ್ಕೆ ವೇಗ ನೀಡಲು “ನೋ ವ್ಯಾಕ್ಸಿನೇಷನ್- ನೋ ರೇಷನ್, ನೋ ಪೆನ್ಷನ್” ಎಂಬ ಜಾಗೃತಿ ಕಾರ್ಯಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದು, ಮೂಲ ಸೌಕರ್ಯಗಳನ್ನು ನೀಡುವುದಿಲ್ಲ ಎಂದು ಹೆದರಿಸುವುದು ಅಕ್ರಮ ಎಂದು ಚಾಮರಾಜನಗರದ ಡಿಸಿ ಡಾ.ಎಂ.ಆರ್.ರವಿ ವಿರುದ್ಧ ಕಿಡಿ ಕಾರಿದ್ದಾರೆ.

ತಮ್ಮ ಫೇಸ್ ಬುಕ್ ನಲ್ಲಿ ಕೋವಿಡ್ ಲಸಿಕೆ ಪಡೆಯದಿದ್ರೆ ಪಡಿತರ, ಪಿಂಚಣಿ ಎರಡೂ ಇಲ್ಲ ಎಂದು ಚಾಮರಾಜನಗರದಲ್ಲಿ ಬಿಜೆಪಿ ಸರ್ಕಾರ ಹೇಳುತ್ತಿದೆ. ಅಂದರೆ ಲಸಿಕೆಗಳು ಜನಸಂಖ್ಯೆಗೆ ಸಾಕಾಗುವಷ್ಟು ಇವೆಯಾ? ಲಸಿಕೆ ಪಡೆಯುವಂತೆ ಜನರ ಮನವೊಲಿಸಿದ್ದಾರಾ? ಮೂಲ ಸೌಕರ್ಯಗಳಾದ ಆಹಾರ ಮತ್ತು ಪಿಂಚಣಿ ನೀಡುವುದಿಲ್ಲ ಎಂಬ ಹೆದರಿಸುವುದು ಅಕ್ರಮ. ಈ ರೀತಿ ಮಾಡುವುದು ಅನೈತಿಕ ಹಾಗೂ ಅಸಂವಿಧಾನಿಕ ಎಂದು ಕಿಡಿಕಾರಿದ್ದಾರೆ.

ಬಿಜೆಪಿ ಸರ್ಕಾರ ಹಾಗೂ ಚಾಮರಾಜನಗರ ಜಿಲ್ಲಾಡಳಿತಕ್ಕೆ ನಾಚಿಕೆಯಾಗಬೇಕು. ಆಕ್ಸಿಜನ್ ಪೂರೈಸಲು ಅಸಮರ್ಥರಾಗಿ 36 ಅಮಾಯಕರ ಜೀವ ತೆಗೆದಿದ್ದಾರೆ. ಲಸಿಕೆ ಪಡೆಯದವರಿಗೆ ಶಿಕ್ಷಿಸಲು ಮುಂದಾಗಿರುವವರು ಮೊದಲು ಆಕ್ಸಿಜನ್, ಲಸಿಕೆ, ಪರೀಕ್ಷೆ ಹಾಗೂ ಮೃತರಿಗೆ ಸೂಕ್ತ ಪರಿಹಾರ ನೀಡದಿದ್ದಕ್ಕೆ ಕ್ಷಮೆ ಕೇಳಲಿ ಎಂದು ಬರೆದುಕೊಂಡಿದ್ದಾರೆ.

ಲಸಿಕಾ ಅಭಿಯಾನಕ್ಕೆ ವೇಗ ನೀಡಲು ಮತ್ತು ಅಸಡ್ಡೆ ತೋರುವವರಿಗೆ ಬಿಸಿ ಮುಟ್ಟಿಸಲು ಲಸಿಕೆ ಪಡೆಯದಿದ್ದರೆ ಪಡಿತರ ಮತ್ತು ಪಿಂಚಣಿ ತಡೆ ಹಿಡಿಯುವ ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿರುವ ಬಗ್ಗೆ ಈ ಹಿಂದೆ ಡಿಸಿ ರವಿ ಹೇಳಿದ್ದರು.