ಮೈಸೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮುಗಿದ ಅಧ್ಯಾಯ. ಇನ್ನೂ ಎರಡು ವರ್ಷ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ. ಈ ಬಗ್ಗೆ ಯಾರಿಗೂ ಗೊಂದಲ ಬೇಡ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹೇಳಿದ್ದಾರೆ.
ಇಂದು ಮೃಗಾಲಯದ ಸಿಬ್ಬಂದಿಗೆ ಫುಡ್ ಕಿಟ್ ವಿತರಿಸಲು ಆಗಮಿಸಿದ ವೇಳೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಬಿ.ವೈ.ವಿಜಯೇಂದ್ರ ಅವರು ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮುಗಿದ ಅಧ್ಯಾಯ. ಇನ್ನೂ ಎರಡು ವರ್ಷ ಯಡಿಯೂರಪ್ಪ ಅವರೇ ಸಿಎಂ ಆಗಿರುತ್ತಾರೆ. ಹೈಕಮಾಂಡ್ ಈಗಾಗಲೇ ಈ ಬಗ್ಗೆ ಸ್ಪಷ್ಟಪಡಿಸಿದೆ. ಪದೇ ಪದೇ ಚರ್ಚೆ ಬೇಡ, ದೆಹಲಿಗೆ ಹೋದ ಕೂಡಲೇ ಅದಕ್ಕೆ ರಾಜಕೀಯ ಬಣ್ಣ ಹಚ್ಚುವುದು ಬೇಡ. ಎಕ್ಸಾಂ ಬರೆದಾಗಿದೆ ರಿಸಲ್ಟ್ ಕೂಡ ಬಂದಿದೆ ಇನ್ನೂ ಈ ಬಗ್ಗೆ ಗೊಂದಲಗಳು ಬೇಡ ಎಂದರು.
ನಾನು ಚುನಾವಣೆಗೆ ನಿಲ್ಲಬೇಕೋ ಅಥವಾ ಬೇಡವೋ, ನಿಲ್ಲುವುದಾದರೆ ಯಾವ ಕ್ಷೇತ್ರದಿಂದ ನಿಲ್ಲಬೇಕು ಎಂಬುದನ್ನು ಎರಡು ವರ್ಷಗಳ ನಂತರ ತೀರ್ಮಾನವಾಗುತ್ತದೆ. ಅಲ್ಲಿಯವರೆಗೆ ಪಕ್ಷ ಸಂಘಟನೆ ಮಾಡಲು ಇಡಿ ರಾಜ್ಯ ಸುತ್ತುವುದು ನನ್ನ ಕೆಲಸ. ವರುಣ ಕ್ಷೇತ್ರದ ಕಾರ್ಯಕರ್ತರ ಜೊತೆ ನಿರಂತರ ಸಂಪರ್ಕ ಇರುವುದು ನಿಜ ಎಂದು ಇದೇ ವೇಳೆ ಬಿ.ವೈ.ವಿಜಯೇಂದ್ರ ತಿಳಿಸಿದರು.










