ಹಾವೇರಿ : ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ ಆರೋಪಿಗೆ ಜಿಲ್ಲೆಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಜೈಲುಶಿಕ್ಷೆ ಹಾಗೂ 25 ಸಾವಿರ ದಂಡವನ್ನು ವಿಧಿಸಿ ಆದೇಶ ಹೊರಡಿಸಿದೆ. ಹಸಂಭಾವಿ ಠಾಣಾ ವ್ಯಾಪ್ತಿಯ ಲಿಂಗಾಪುರ ಗ್ರಾಮದ ನಿವಾಸಿ ಮಂಜಪ್ಪ ಭೋಜಪ್ಪ ಚೌಡಣ್ಣನವರ್ ಯುವತಿಯನ್ನು ನಂಬಿಸಿ ಅತ್ಯಾಚಾರ ಎಸಗಿದ ಆರೋಪಿ. ಮಂಜಪ್ಪ ಅವರು ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಬಲವಂತವಾಗಿ ಅತ್ಯಾವಾರ ಎಸಗಿ ಮೋಸ ಮಾಡಿದ್ದರು. ಅಲ್ಲದೇ ಯುವತಿಯ ಜಾತಿ ನಿಂದನೆ ಮಾಡಿದ್ದರು ಎನ್ನಲಾಗಿದ್ದು, ಹೀಗಾಗಿ ಸಂತ್ರಸ್ಥ ಯುವತಿ ಈ ಕುರಿತು ಹಸಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಕಿರಣ ಕಿಣಿ ನೇತೃತ್ವದ ಪೀಠ 10 ವರ್ಷ ಜೈಲುವಾಸ ಹಾಗೂ 25 ಸಾವಿರ ರೂ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.










