ಯುವತಿಯ ಮಾಜಿ ಪ್ರಿಯಕರನಿಂದ ಹಾಲಿ ಪ್ರಿಯಕರನ ಹತ್ಯೆ!

60
firstsuddi

ಬೆಂಗಳೂರು : ಯುವತಿಯ ಮಾಜಿ ಪ್ರಿಯಕರನೊಬ್ಬ ಹಾಲಿ ಪ್ರೇಮಿಯನ್ನು ಹತ್ಯೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ಶಿವಮೊಗ್ಗ ಮೂಲದ ಸಮರ್ಥ್ ನಾಯರ್ ಕೊಲೆಯಾದ ದುರ್ದೈವಿ. ಕೊಲೆ ಮಾಡಿದ ಆರೋಪದಡಿ ಮೂವರು ಆರೋಪಿಗಳಾದ ಕಿರಣ್,ಅರುಣ್, ಹಾಗೂ ರಾಕೇಶ್ ನನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಹಲವು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದ ಸಮರ್ಥ್, ಗಾರ್ಮೆಂಟ್ಸ್ ಕಂಪನಿಯೊಂದರಲ್ಲಿ ಕ್ವಾಲಿಟಿ ಚೆಕ್ ಲೀಡರ್ ಆಗಿ ಕೆಲಸ ಮಾಡುತ್ತಿದ್ದ. ಈತ ಭದ್ರಾವತಿ ಮೂಲದ ಯುವತಿಯನ್ನು ಪ್ರೀತಿಸುತ್ತಿದ್ದನಂತೆ. ಆದ್ರೆ ಸಮರ್ಥ್ ಪರಿಚಯವಾಗುವ ಮುನ್ನ ಯುವತಿ ಕಂಪನಿಯೊಂದರಲ್ಲಿ ಕೆಲಸ ಮಾಡುವಾಗ ಕಿರಣ್(ಆರೋಪಿ)ನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಆದರೆ, ಹಲವಾರು ವಿಚಾರಕ್ಕೆ ಕಿರಣ್ ಜೊತೆಗೆ ಯುವತಿ ಬ್ರೇಕಪ್ ಮಾಡಿಕೊಂಡು, ಬಳಿಕ ಸಮರ್ಥ್ ಜೊತೆಯಲ್ಲಿ ಪ್ರೀತಿಯಲ್ಲಿ ಬಿದ್ದಿದ್ದಳಂತೆ. ಈ ವಿಚಾರಕ್ಕೆ ಕಿರಣ್ ಹಾಗೂ ಸಮರ್ಥ್ ನಡುವೆ ಗಲಾಟೆಯಾಗಿತ್ತು.

ಕಳೆದ ಶನಿವಾರ ಮೃತ ಸಮರ್ಥ್ ನಾಯರ್ ಹಾಗೂ ಆತನನ್ನು ಪ್ರೀತಿಸುತ್ತಾ ಇದ್ದ ಯುವತಿ ಒಟ್ಟಿಗೆ ಇದ್ದರು. ಈ ವೇಳೆ ಯುವತಿಯ ಮಾಜಿ ಪ್ರೇಮಿ ಕಿರಣ್, ತನ್ನ ಸ್ನೇಹಿತರಾದ ಅರುಣ್ ಹಾಗೂ ರಾಕೇಶ್ ಎಂಬುವರ ಜೊತೆ ಅಲ್ಲಿಗೆ ಎಂಟ್ರಿ ಕೊಟ್ಟಿದ್ದ. ಬಂದವರು ಏಕಾಏಕಿ ಸಮರ್ಥ್ ತಲೆಗೆ ಕಾಲಿನಿಂದ ಒದ್ದು, ಗೋಡೆಗೆ ತಲೆ ಹಿಡಿದು ಚಚ್ಚಿ ಎಸ್ಕೇಪ್ ಆಗಿದ್ದರು. ಈ ವೇಳೆ ಸಮರ್ಥ್ ನಾಯರ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಸಮರ್ಥ್ ನಾಯರ್ ನನ್ನು ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟಿದ್ದಾನೆ.