ರಜನೀಕಾಂತ್ ‘ವೆಟೈಯಾನ್’ ಸಿನಿಮಾದ ವಿರುದ್ಧ ದೂರು ದಾಖಲು.

30

ಚೆನೈ: ರಜನೀಕಾಂತ್ ನಿನ್ನೆಯಷ್ಟೆ ಚೆನೈನ ಅಪೋಲೊ ಆಸ್ಪತ್ರೆಯಿಂದ ಡಿಸ್‍ಚಾರ್ಜ್ ಆಗಿ ಮನೆಗೆ ಮರಳಿದ್ದಾರೆ. ಅಭಿಮಾನಿಗಳಿಗೆ ಈ ಸುದ್ದಿ ಖುಷಿ ನೀಡಿದೆ. ಇದರ ಬೆನ್ನಲ್ಲೆ ಬಿಡುಗಡೆಗೆ ತಯಾರಾಗಿರುವ ರಜನೀಕಾಂತ್‍ರ ಹೊಸ ಸಿನಿಮಾ ‘ವೆಟ್ಟೆಯಾನ್’ ವಿರುದ್ಧ ಪ್ರಕರಣ ದಾಖಲಾಗಿದೆ. ಸಿನಿಮಾದ ಟ್ರೈಲರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಟ್ರೈಲರ್‌ನಲ್ಲಿ ಕೇಳಿ ಬರುವ ಕೆಲ ಸಂಭಾಷಣೆಗಳ ವಿರುದ್ಧ ವಕೀಲರೊಬ್ಬರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲು ಮಾಡಿದ್ದು, ಸಿನಿಮಾದಲ್ಲಿ ಬಳಸಲಾಗಿರುವ ಕೆಲವು ಸಂಭಾಷಣೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪಲನಿವೇಲುಸ್ವಾಮಿ ಎಂಬುವರು ಹೈಕೋರ್ಟ್‍ನ ಮಧುರೈ ಬೆಂಚ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದು, ‘ವೆಟ್ಟೆಯಾನ್’ ಸಿನಿಮಾದಲ್ಲಿ ಬಳಸಲಾಗಿರುವ ಎನ್‍ಕೌಂಟರ್ ಕುರಿತಾದ ಸಂಭಾಷಣೆಗಳ ಬಗ್ಗೆ ಆಕ್ಷೇಪಣೆ ಎತ್ತಿದ್ದು, ಸಿನಿಮಾದ ಬಿಡುಗಡೆಗೆ ತಾತ್ಕಾಲಿಕ ತಡೆ ನೀಡಬೇಕೆಂದು ಮನವಿ ಮಾಡಿದ್ದರು. ಸಿನಿಮಾದ ಟ್ರೈಲರ್‌ನಲ್ಲಿ ನಾಯಕ ಎನ್‍ಕೌಂಟರ್ ಕುರಿತಾಗಿ ಹೀರೋಯಿಕ್ ಸಂಭಾಷಣೆಗಳನ್ನು ಹೇಳುವ ದೃಶ್ಯಗಳಿವೆ. ಈ ದೃಶ್ಯಗಳು ಹಾಗೂ ಸಂಭಾಷಣೆಗಳ ಬಗ್ಗೆ ಪಲನಿವೇಲುಸ್ವಾಮಿ ಆಕ್ಷೇಪ ಎತ್ತಿದ್ದಾರೆ.
‘ಸಿನಿಮಾದಲ್ಲಿ ಅಕ್ರಮ ಚಟುವಟಿಕೆಯಾದ ಎನ್‌ಕೌಂಟರ್‌ಗೆ ಒತ್ತು ನೀಡುವ, ಎನ್‍ಕೌಂಟರ್ ಅನ್ನು ಸರಿಯೆಂದು ವಾದಿಸುವ ಸಂಭಾಷಣೆಗಳಿವೆ. ಇದು ಸಮಾಜಕ್ಕೆ ಮಾರಕವಾಗಿದ್ದು, ಈ ಸಿನಿಮಾ ಬಿಡುಗಡೆ ಆದರೆ ಜನರ ಮನಸ್ಸಿನಲ್ಲಿ ಎನ್‍ಕೌಂಟರ್‍ಗಳು ಸರಿಯೆಂಬ ಭಾವನೆ ಜನರ ಮನಸಿನಲ್ಲಿ ಮೂಡಲಿದೆ. ಹಾಗಾಗಿ ಈ ಸಿನಿಮಾದಲ್ಲಿರುವ ಎನ್‍ಕೌಂಟರ್ ಕುರಿತಾದ ಸಂಭಾಷಣೆಗಳನ್ನು ಮ್ಯೂಟ್ ಮಾಡುವಂತೆ ನಿರ್ಮಾಣಸಂಸ್ಥೆಗೆ ಸೂಚಿಸಬೇಕು, ಇಲ್ಲವಾದರೆ ಸಿನಿಮಾದ ಬಿಡುಗಡೆಗೆ ತಾತ್ಕಾಲಿಕ ತಡೆ ನೀಡಬೇಕೆಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಕೋರಲಾಗಿದೆ. ಅರ್ಜಿಯ ವಿಚಾರಣೆ ನಡೆಸಿದ ದ್ವಿಸದಸ್ಯ ಪೀಠವು, ಸಿಬಿಎಫ್‍ಸಿ ಹಾಗೂ ಸಿನಿಮಾ ನಿರ್ಮಾಣ ಮಾಡಿರುವ ಲೈಕಾ ಪ್ರೊಡಕ್ಷನ್ ಹೌಸ್‍ಗೆ ನೊಟೀಸ್ ಜಾರಿ ಮಾಡಿದೆ. ಆದರೆ ಸಿನಿಮಾದ ಬಿಡುಗಡೆ ಮೇಲೆ ತಾತ್ಕಾಲಿಕ ತಡೆ ನೀಡಲು ಪೀಠವು ನಿರಾಕರಿಸಿದೆ. ಸಿಬಿಎಫ್‍ಸಿ ಹಾಗೂ ಲೈಕಾ ಪ್ರೊಡಕ್ಷನ್ ಹೌಸ್‍ನ ಪ್ರತಿಕ್ರಿಯೆ ಬಂದ ಬಳಿಕ ಈ ಅರ್ಜಿಯ ಮುಂದಿನ ವಿಚಾರಣೆ ನಡೆಯಲಿದೆ. ‘ವೆಟ್ಟೈಯಾನ್’ ಸಿನಿಮಾದಲ್ಲಿ ರಜನೀಕಾಂತ್ ಪೊಲೀಸ್ ಪಾತ್ರಧಾರಿಯಾಗಿ ನಟಿಸಿದ್ದು, ಅವರು ಎನ್‍ಕೌಂಟರ್ ಸ್ಪೆಷಲಿಸ್ಟ್ ಆಗಿರುತ್ತಾರೆ. ಅಪರಾಧಿಗಳನ್ನು ಗುಂಡಿಕ್ಕಿ ಕೊಲ್ಲುವುದು ಅವರ ಕೆಲಸ, ವಕೀಲರ ಪಾತ್ರದಲ್ಲಿ ನಟಿಸಿರುವ ಅಮಿತಾಬ್ ಬಚ್ಚನ್ ಈ ಎನ್‌ಕೌಂಟರ್‌ಗಳನ್ನು ವಿರೋಧಿಸುತ್ತಾರೆ. ಆಗ ರಜನೀಕಾಂತ್, ಎನ್‍ಕೌಂಟರ್ ಒಳ್ಳೆಯದು ಎಂಬರ್ಥದ ಡೈಲಾಗ್‍ಗಳನ್ನು ಹೇಳಿರುವ ದೃಶ್ಯಗಳು ಟ್ರೈಲರ್‌ನಲ್ಲಿವೆ. ಸಿನಿಮಾವನ್ನು ಜ್ಞಾನವೇಲು ನಿರ್ದೇಶನ ಮಾಡಿದ್ದು, ಸಿನಿಮಾ ಅಕ್ಟೋಬರ್ 10ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ರಜನೀಕಾಂತ್ ಜೊತೆಗೆ ಅಮಿತಾಬ್ ಬಚ್ಚನ್, ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ ಅವರುಗಳು ನಟಿಸಿದ್ದಾರೆ.