ರಮೇಶ್ ಜಾರಕಿಹೊಳಿ ಅವರಿಗೆ ಬಿಜೆಪಿ ಗರ್ಭಗುಡಿ ಸಂಸ್ಕೃತಿ ಒಗ್ಗುತ್ತಿಲ್ಲ : ಶಾಸಕ ಅಮರೇಗೌಡ.

108
firstsuddi

ಕೊಪ್ಪಳ : ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಕುಷ್ಟಗಿ ಕ್ಷೇತ್ರದ ಕೈ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಅವರು, ರಮೇಶ್ ಜಾರಕಿಹೊಳಿ ಅವರು ಇತ್ತೀಚೆಗೆ ಮುಂಬೈಗೆ ಹೋಗಿ ಬಂದಿರುವುದನ್ನು ನೋಡಿದರೆ ಅವರು ಬಿಜೆಪಿ ತೊರೆಯುವ ಸಾಧ್ಯತೆ ಇದೆ. ಅವರೊಂದಿಗೆ ಕೆಲವರು ಕಾಂಗ್ರೆಸ್ ಅಥವಾ ಜೆಡಿಎಸ್ ಗೆ ಮತ್ತೆ ಸೇರುವ ಸಾಧ್ಯತೆ ಇದೆ. ಬಿಜೆಪಿಯ ಗರ್ಭಗುಡಿ ಸಂಸ್ಕೃತಿ ಒಗ್ಗುತ್ತಿಲ್ಲ ಎನ್ನುವುದು ಅವರ ನಡುವಳಿಕೆಯಿಂದ ತಿಳಿಯುತ್ತಿದೆ. ಒಂದು ವೇಳೆ ಅವರು ವಾಪಸ್ ಬಂದರೆ ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.

ಯಾವುದೇ ಪಕ್ಷದ ಶಾಸಕರಾಗಲಿ ಅವಧಿಯ ಮುನ್ನ ಪಕ್ಷಾಂತರ ಮಾಡಬಾರದು. ಚುನಾವಣಾ ಸಂದರ್ಭದಲ್ಲಿ ಪಕ್ಷಾಂತರ ಮಾಡಿದರೆ ನಡೆಯುತ್ತದೆ. ರಮೇಶ್ ಜಾರಕಿಹೊಳಿ ಅವರು ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ತೆಗೆಯಲು ಹೊರಟಿಲ್ಲ ಎಂದು ಅನಿಸುತ್ತದೆ. ಏಕೆಂದರೆ ಯಡಿಯೂರಪ್ಪ ಅಧಿಕಾರಕ್ಕೆ ಬರಲು ರಮೇಶ್ ಜಾರಕಿಹೊಳಿ ಅವರೇ ಕಾರಣ. ಬಿಜೆಪಿಯಲ್ಲಿ ಯಡಿಯೂರಪ್ಪ ಇಲ್ಲವೆಂದರೆ ಬಿಜೆಪಿ ಇಲ್ಲ. ಸಂದರ್ಭ ಬಂದಾಗ ಶಾಸಕರು ಪಕ್ಷ ಬದಲಾಯಿಸುವುದು ಸಹಜ. ಆದರೆ ಇತ್ತೀಚಿನ ದಿನಗಳಲ್ಲಿ ಅದು ಅತಿರೇಕಕ್ಕೆ ಹೋಗಿದೆ ಎಂದು ತಿಳಿಸಿದರು.

ಇನ್ನೂ ಮುಂದಿನ ಸಿಎಂ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನಲ್ಲಿ ಸಿಎಂ ಸ್ಥಾನದ ಬಗ್ಗೆ ಈಗ ಚರ್ಚಿಸಿದರೆ ಅದು ಬಿಜೆಪಿಗೆ ಅನುಕೂಲವಾಗಲಿದೆ. ನಾವೇ ಅವರಿಗೆ ಆಹಾರವಾಗುವುದು ಬೇಡ. ಕಾಂಗ್ರೆಸ್ ಪಕ್ಷದಲ್ಲಿ 7 ರಿಂದ 8 ಜನ ಸಿಎಂ ಸ್ಥಾನಕ್ಕೆ ಅರ್ಹತೆ ಹೊಂದಿದವರಿದ್ದಾರೆ. ಸಿಎಂ ಸ್ಥಾನಕ್ಕೆ ಕೆಲವರು ಕೆಲವರ ಹೆಸರು ಹೇಳುತ್ತಿದ್ದರೂ ತಪ್ಪೇನಿಲ್ಲ ಚುನಾವಣೆ ಬಳಿಕ ಹೈಕಮಾಂಡ್ ಈ ಬಗ್ಗೆ ನಿರ್ಧಾರ ಮಾಡಲಿದೆ ಎಂದು ಅಭಿಪ್ರಾಯಪಟ್ಟರು.