ಬೆಂಗಳೂರು : ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡುವ ಅಗತ್ಯತೆ ಇಲ್ಲ. ಪ್ರಕರಣದ ತನಿಖೆಯ ಬಳಿಕವಷ್ಟೇ ರಾಜೀನಾಮೆ ಕೊಡಲಿ ಎಂದು ಸಹೋದರ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ಸಿಎಂ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಕುಟುಂಬದ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ. ಈ ವಿಡಿಯೋ ಹಿಂದೆ ಪ್ರಭಾವಿ ರಾಜಕಾರಣಿಯವರ ಕೈವಾಡ ಇದೆ. ವಿದೇಶಗಳಿಂದ ಯೂಟ್ಯೂಬ್ಗೆ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. ಹೀಗಾಗಿ ಈ ಬಗ್ಗೆ ಸಮಗ್ರವಾಗಿ ತನಿಖೆ ಆಗಬೇಕು. ಸಿಎಂ ಕೂಡ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದರು.
ಮೇಟಿ ರಾಜೀನಾಮೆ ಕೊಡುವ ವೇಳೆ ಸಂತ್ರಸ್ತ ಮಹಿಳೆ ದೂರು ನೀಡಿದ್ದರು. ಅದಕ್ಕೆ ಅವರು ರಾಜೀನಾಮೆ ಕೊಟ್ಟಿದ್ದರು. ಈಗ ರಮೇಶ್ ಜಾರಕಿಹೊಳಿ ಅವರ ಜೊತೆಗಿರುವ ಮಹಿಳೆ ಯಾರು ಎಂದೇ ಗೊತ್ತೇ ಇಲ್ಲ. ಅವಳ ಹೆಸರು ಕೂಡ ಗೊತ್ತಲ್ಲ. ಆ ವಿಡಿಯೋ ಫೇಕ್ ಆಗಿದೆ. ಒಂದು ವೇಳೆ ಸಂತ್ರಸ್ತ ಮಹಿಳೆ ಬಂದು ದೂರು ನೀಡಿದರೆ ರಾಜೀನಾಮೆ ಬಗ್ಗೆ ನೋಡೋಣ, ಈಗ ಆ ಮಹಿಳೆ ದೂರು ನೀಡದೇ ಯಾರೋ ಒಬ್ಬರು ಬಂದು ದೂರು ಕೊಟ್ಟರೆ ಅದನ್ನು ದೂರು ಅಂತ ಪರಿಗಣಿಸಲು ಆಗುವುದಿಲ್ಲ. ಹೀಗಾಗಿ ರಮೇಶ್ ಜಾರಕಿಹೊಳಿ ಅವರು ರಾಜೀನಾಮೆ ನೀಡುವ ಅಗತ್ಯತೆ ಇಲ್ಲ. ಇಂದು ಮಧ್ಯಾಹ್ನ ಸಿಎಂ ಯಡಿಯೂರಪ್ಪ ಅವರನ್ನು ರಮೇಶ್ ಅವರು ಭೇಟಿ ಮಾಡಿ ವಿವರಣೆ ನೀಡಲಿದ್ದಾರೆ ಎಂದರು.










