ಬೆಂಗಳೂರು : ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಆರ್ ಪಿಸಿ 164 ಅಡಿಯಲ್ಲಿ ತಮ್ಮ ಮಗಳು ನೀಡಿರುವ ಸ್ವಇಚ್ಛಾ ಹೇಳಿಕೆಯನ್ನ ರದ್ದು ಮಾಡಬೇಕು ಎಂದು ಯುವತಿ ಪೋಷಕರು ರಿಟ್ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಯುವತಿ ಪರ ವಕೀಲರಾದ ಸಂಕೇತ್ ಏಣಗಿ ಅವರು ಸಿಆರ್ ಪಿಸಿ164 ಅಡಿಯಲ್ಲಿ ಹೇಳಿಕೆ ನ್ಯಾಯಬದ್ಧವಾಗಿದ್ದು, ಸುಪ್ರೀಂಕೋರ್ಟ್ ನ ನಿರ್ಭಯ ಅತ್ಯಾಚಾರ ಪ್ರಕರಣದ ತೀರ್ಪಿನ ಅನುಸಾರವಾಗಿದೆ. ಸಂತ್ರಸ್ತೆ ಮ್ಯಾಜಿಸ್ಟ್ರೇಟ್ ಎದುರಿಗೆ ಸ್ವಇಚ್ಛೆಯಿಂದ ಹಾಗೂ ಯಾವುದೇ ಒತ್ತಾಯವಿಲ್ಲದೆ ಹೇಳಿಕೆ ನೀಡಿದ್ದು ಅದು ನ್ಯಾಯಬದ್ಧವಾಗಿದೆ ಎಂದು ವಾದ ಮಂಡಿಸಿದ್ರು. ಇನ್ನೂ ಎಸ್ ಐಟಿ ಪರ ನ್ಯಾಯವಾದಿ ಪ್ರಸನ್ನಕುಮಾರ್ ಅವರು ಸಿಡಿಯಲ್ಲಿದ್ದ ಯುವತಿ ಈಗಾಗಲೇ ಹೇಬಿಯಸ್ ಕಾರ್ಪಸ್ ಪ್ರಕರಣದಲ್ಲಿ ನ್ಯಾಯಾಮೂರ್ತಿಗಳ ಮುಂದೆ ಹೇಳಿಕೆ ನೀಡಿದ್ದಾಳೆ. ಈ ಹಂತದಲ್ಲಿ ಯುವತಿಯ ತಂದೆಯ ಅರ್ಜಿ ಆಧರಿಸಿ ಸಿಆರ್ ಪಿಸಿ164 ಅಡಿ ಹೇಳಿಕೆಯ ಕಾನೂನುಬದ್ಧತೆ ನ್ಯಾಯಾಲಯ ನಿರ್ಧರಿಸಲಾಗದು ಎಂದು ವಾದಿಸಿದ್ದರು. ವಾದ ಪ್ರತಿವಾದ ಆಲಿಸಿದ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ನೇತೃತ್ವದ ಏಕಸದಸ್ಯ ಪೀಠ, ಯುವತಿ ತಂದೆಯ ಅರ್ಜಿಯನ್ನು ವಜಾಗೊಳಿಸಿದೆ.
ಇನ್ನೂ ಪ್ರಕರಣದ ಆರಂಭದಲ್ಲಿ ಯುವತಿ ನನಗೆ ಗೊತ್ತೆ ಇಲ್ಲ ಎಂದು ಹೇಳುತ್ತಿದ್ದ ರಮೇಶ್ ಜಾರಕಿಹೊಳಿ ಅವರು ಆ ಯುವತಿ ನನಗೆ ಗೊತ್ತು ಅಂತ ಹೇಳಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ ಆಕೆಯ ಸಮ್ಮತಿಯ ಮೇರೆಗೆ ಲೈಂಗಿಕ ಕ್ರಿಯೆ ನಡೆದಿತ್ತು ಎಂದು ಎಸ್ಐಟಿ ಮುಂದೆ ರಮೇಶ್ ಜಾರಕಿಹೊಳಿ ಹೇಳಿಕೆ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.










