ದಾವಣೆಗೆರೆ : ರಸ್ತೆ ಬಳಿ ನಿಂತಿದ್ದ ಕಬ್ಬಿನ ಟ್ರಾಕ್ಟರ್ ಗೆ ಬೈಕ್ ಡಿಕ್ಕಿಯಾಗಿ ನವವಿವಾಹಿತ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಕೋಡದ ಬಳಿ ನಡೆದಿದೆ. ಸಂಜಯ್ (28) ಮೃತ ದುರ್ದೈವಿ.
ಮೃತ ಸಂಜಯ್ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಜಿಗಳಿ ಗ್ರಾಮದ ನಿವಾಸಿ. ಕಳೆದ ನವೆಂಬರ್ 28 ರಂದು ಗದಗ ಮೂಲದ ಪ್ರೀತಿಯನ್ನ ವಿವಾಹವಾಗಿದ್ದರು. ಇಬ್ಬರು ಸಹ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿದ್ದು, ಹನಿಮೂನ್ ಗೆಂದು ಡಿ. 10ಕ್ಕೆ ಹರಿಹರದ ಜಿಗಳಿಯಿಂದ ಧಾರ್ಮಿಕ ಕ್ಷೇತ್ರಗಳಿಗೆ ಬೈಕ್ ನಲ್ಲಿ ಎರಡು ದಿನಗಳ ಕಾಲ ಹೋಗಿದ್ದರು.
ಮೊದಲು ಸಾಗರ ತಾಲೂಕಿನ ಸಿಂಗಧೂರು ದೇವಿ ದರ್ಶನ ಪಡೆದಿದ್ದಾರೆ. ಬಳಿಕ ಮುರುಡೇಶ್ವರಕ್ಕೆ ಹೋಗಿ ರಾತ್ರಿ ತಂಗಿದ್ದಾರೆ. ಡಿಸೆಂಬರ್ 11ಕ್ಕೆ ಶಿರಸಿಗೆ ಬಂದು ಅಲ್ಲಿ ಮಾರಿಕಾಂಬಾ ದೇವಿ ದರ್ಶನ ಪಡೆದು ವಾಪಸ್ಸು ಜಿಗಳಿಗೆ ಹೋಗುತ್ತಿರುವಾಗ ಈ ಅವಘಡ ಸಂಭವಿಸಿದೆ. ಪರಿಣಾಮ ಸಂಜಯ್ ತಲೆಗೆ ತೀವ್ರ ಪೆಟ್ಟಾಗಿದ್ದು, ಎರಡೂ ಕಿವಿಯಲ್ಲಿ ರಕ್ತಸ್ರಾವವಾಗಿದೆ. ಜೊತೆಗೆ ಬೈಕ್ ನಲ್ಲಿದ್ದ ಪ್ರೀತಿಗೂ ಗಂಭೀರ ಗಾಯಗಳಾಗಿತ್ತು.
ಘಟನೆ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಹಂಸಬಾವಿ ಪೊಲೀಸರು ಗಾಯಗೊಂಡ ದಂಪತಿಯನ್ನು ರಾಣೆಬೆನ್ನೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಹೆಚ್ಚಿನ ಚಿಕಿತ್ಸೆಗಾಗಿ, ದಾವಣಗೆರೆ ಬಾಪೂಜಿ ಆಸ್ಪತ್ರೆಗೆ ಕರೆದುಕೊಂಡು ಬರುವ ವೇಳೆ ದಾರಿ ಮಧ್ಯೆ ಸಂಜಯ್ ಮೃತಪಟ್ಟಿದ್ದಾರೆ. ಪತ್ನಿ ಪ್ರೀತಿಯ ಎರಡು ಕೈ ಹಾಗೂ ತಲೆ ಮತ್ತು ಸೊಂಟಕ್ಕೆ ತೀವ್ರ ಪೆಟ್ಟಾಗಿದೆ. ಸದ್ಯ ದಾವಣಗೆರೆ ಬಾಪೂಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ತನ್ನ ಗಂಡ ಸಂಜಯ್ ನೋಡಲು ಪ್ರೀತಿ ಸ್ಟ್ರೆಚರ್ ನಲ್ಲಿ ಶವಾಗಾರಕ್ಕೆ ಬಂದು ಕೊನೆಯ ಬಾರಿಗೆ ಬಾಳಸಂಗಾತಿಯ ಕೆನ್ನೆ ಸವರಿ ಬೀಳ್ಕೊಟ್ಟಿದ್ದಾರೆ. ಈ ದೃಶ್ಯ ಅಲ್ಲಿದ್ದವರನ್ನು ಮೂಕರೋದನೆಗೆ ತಳ್ಳಿತ್ತು.










