ರಾಜ್ಯಗಳು ಹೆಚ್ಚಿನ ತೆರಿಗೆ ಪಾಲು ಕೇಳೋದು ಸಣ್ಣತನ: ಕೇಂದ್ರ ಸಚಿವ ಪಿಯೂಷ್ ಗೋಯಲ್.

27

ಮುಂಬೈ: ಕೇಂದ್ರ ಸರ್ಕಾರ ತೆರಿಗೆ ಪಾಲು ಹಂಚಿಕೆಯಲ್ಲಿ ಅನ್ಯಾಯ ಮಾಡುತ್ತಿದೆ ಎಂಬ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಬೇಡಿಕೆ ಸರಿಯಲ್ಲ. ತಾವು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ತೆರಿಗೆಯಲ್ಲಿ ಹೆಚ್ಚಿನ ತೆರಿಗೆ ಪಾಲು ಕೇಳುವುದು ಆ ರಾಜ್ಯಗಳ ಸಣ್ಣತನ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ವಾಗ್ದಾಳಿ ನಡೆಸಿದರು. ಜೊತೆಗೆ ಹೆಚ್ಚಿನ ಆದಾಯ ಹೊಂದಿರುವ ರಾಜ್ಯಗಳು, ಪ್ರಾಧಾನಿ ನರೇಂದ್ರ ಮೋದಿ ಅವರಂತೆ ವಿಶಾಲ ದೃಷ್ಟಿಕೋನದಿಂದ ಚಿಂತಿಸಬೇಕು ಎಂಬರ್ಥದಲ್ಲಿ ದಕ್ಷಿಣದ ರಾಜ್ಯಗಳಿಗೆ ಸಲಹೆಯನ್ನೂ ನೀಡಿದ್ದಾರೆ. ಮುಂಬೈನಲ್ಲಿ ಶನಿವಾರ ನಡೆದ ಎಬಿವಿಪಿ ಕಾರ್ಯಕ್ರಮದಲ್ಲಿ ಮಾತನಾಡಿ, ನರೇಂದ್ರ ಮೋದಿಯವರ ಸರ್ಕಾರ 11 ವರ್ಷಗಳಿಂದ ಮಹಾಭಾರತದ ಅರ್ಜುನನಂತೆ ತನ್ನೆಲ್ಲಾ ಗುರಿಯನ್ನು ದೇಶದ ಈಶಾನ್ಯ ಹಾಗೂ ಪೂರ್ವ ರಾಜ್ಯಗಳ ಅಭಿವೃದ್ಧಿಗೆ ಮೀಸಲಿಟ್ಟಿದೆ. ಆದರೆ ದುರದೃಷ್ಟಕರ ವಿಷಯವೆಂದರೆ ಈ ಹಿಂದೆ ಅಧಿಕಾರದಲ್ಲಿದ್ದ ರಾಜ್ಯ ಸರ್ಕಾರಗಳ ಕೆಲ ನಾಯಕರು, ಕೇಂದ್ರ ಸರ್ಕಾರಕ್ಕೆ ಮುಂಬೈ ಎಷ್ಟು ತೆರಿಗೆ ಕಟ್ಟಿತು, ಮಹಾರಾಷ್ಟ್ರ ಎಷ್ಟು ತೆರಿಗೆ ಕಟ್ಟಿತು, ಎಂದು ಲೆಕ್ಕಾಚಾರ ಹಾಕಿ ಅಷ್ಟೇ ಪಾಲನ್ನು ಕೇಂದ್ರ ಸರ್ಕಾರ ನಮಗೆ ನೀಡಬೇಕು ಎಂದು ಆಗ್ರಹಿಸುತ್ತಿದ್ದರು ಎಂದು ತಿಳಿಸಿದರು. ಕೆಲ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಹೆಚ್ಚು ಇಂತಹ ವಿಚಾರಗಳಿಗೆ ಸ್ಪಂದಿಸುತ್ತವೆ. ಆ ರಾಜ್ಯಗಳು ದೇಶದ ಸಮಗ್ರ ದೃಷ್ಟಿಕೋನ ಹೊಂದಿದ್ದಾರೆ. ಇನ್ನು ಕರ್ನಾಟಕ, ತಮಿಳುನಾಡು, ತೆಲಂಗಾಣದಂಥ ಕೆಲ ರಾಜ್ಯಗಳು ತಾವು ಕೇಂದ್ರಕ್ಕೆ ಪಾವತಿಸಿದಷ್ಟೇ ತೆರಿಗೆ ಹಣ ಕೇಂದ್ರ ಸರ್ಕಾರ ನಮಗೆ ನೀಡಬೇಕು ಎಂದು ಒತ್ತಾಯಿಸುತ್ತಿವೆ. ಇದಕ್ಕಿಂತ ಸಣ್ಣತನದ ಮನೋಭಾವ ಇನ್ನೊಂದಿಲ್ಲ. ಅಲ್ಲದೆ ಇದಕ್ಕಿಂತ ದುರದೃಷ್ಟಕರವಾದ ಘಟನೆ ಇನ್ನೊಂದಿಲ್ಲ ಎಂದು ದಕ್ಷಿಣದ ರಾಜ್ಯಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.