ರಾಜ್ಯದಲ್ಲಿ ಈಗಾ ಇಬ್ಬರು ಮುಖ್ಯಮಂತ್ರಿಗಳಿದ್ದಾರೆ : ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವ್ಯಂಗ್ಯ…

161
firstsuddi

ಕೊಪ್ಪಳ : ರಾಜ್ಯದಲ್ಲಿ ಈಗಾ ಇಬ್ಬರು ಮುಖ್ಯಮಂತ್ರಿಗಳಿದ್ದಾರೆ. ಒಬ್ಬರು ಸಾಂವಿಧಾನಿಕ ಸಿಎಂ ಹಾಗೂ ಇನ್ನೊಬ್ಬರು ಅಸಂವಿಧಾನಿಕ ಸಿಎಂ ಎಂದು ವಿರೋಧಪಕ್ಷ ನಾಯಕ ಸಿದ್ದರಾಮಯ್ಯ ಅವರು ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಈಗಾ ಇಬ್ಬರು ಮುಖ್ಯಮಂತ್ರಿಗಳಿದ್ದಾರೆ. ಮುಖ್ಯಮಂತ್ರಿ ಎಂದು ಯಡಿಯೂರಪ್ಪ ಅವರ ಬಳಿ ಹೋದರೆ ವಿಜಯೇಂದ್ರ ಬಳಿ ಹೋಗಲು ಹೇಳುತ್ತಾರೆ. ಹೀಗಾಗಿ ರಾಜ್ಯಕ್ಕೆ ಇನ್ನೊಬ್ಬ ಮುಖ್ಯಮಂತ್ರಿ ಎಂದರೆ ಅದು ವಿಜಯೇಂದ್ರ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ಸತ್ತು ಹೋಗಿದೆ. ಸಚಿವ ಸೋಮಣ್ಣ ಅವರ ಹೇಳಿಕೆ ಆರ್ಥಿಕತೆಯ ಬಗ್ಗೆ ಅವರಿಗಿರುವ ಅಜ್ಞಾನವನ್ನು ತೋರಿಸುತ್ತದೆ. ನಮ್ಮ ಸರ್ಕಾರದ ಅವಧಿಯಲ್ಲಿ ಆರ್ಥಿಕ ಶಿಸ್ತಿನಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿತ್ತು. ಈಗ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಸರ್ಕಾರದ ಬಳಿ ಹಣವಿಲ್ಲ. ರಾಜ್ಯ ಮಾತ್ರವಲ್ಲ ಇಡೀ ದೇಶವೇ ಆರ್ಥಿಕವಾಗಿ ದಿವಾಳಿಯಾಗಿದೆ. ಸಂವಿಧಾನೇತರ ಮುಖ್ಯಮಂತ್ರಿಯಾಗಿ ವಿಜಯೇಂದ್ರ ಇದ್ದಾರೆ ಅಂತ ಜನ ಹೇಳ್ತಿದ್ದಾರೆ. ಯಡಿಯೂರಪ್ಪ ಹೆಸರಿಗಷ್ಟೇ ಸಿಎಂ, ವಿಜಯೇಂದ್ರ ಸಹಿ ಮಾಡೋದಂತೆ. ಬಹಳ ಜನ ಅಸಮಾಧಾನಿತ ಬಿಜೆಪಿ ಶಾಸಕರು ನನ್ನನ್ನು ಭೇಟಿಯಾಗಿ, ಸಹಜವಾಗಿ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ. ಬಿಜೆಪಿಯಲ್ಲಿ ಭಿನ್ನಮತ ಇರೋದು ನಿಜ. ಆ ಭಿನ್ನಮತ ಮುಂದುವರಿಯಲಿದೆ. ಬಿಜೆಪಿಯ ಆಂತರಿಕ ಕಿತ್ತಾಟದಲ್ಲಿ ನಾವು ಕೈಹಾಕುವುದಿಲ್ಲ. ಸರಕಾರ ಅದರಷ್ಟಕ್ಕೆ ಪತನಗೊಂಡರೆ ನಾವು ಜವಾಬ್ದಾರರಲ್ಲ. ಕೊಪ್ಪಳದಲ್ಲಿ ಪ್ರಗತಿಪರರ ಮೇಲೆ ಕೇಸ್ ಹಾಕಿರುವುದನ್ನು ಖಂಡಿಸುತ್ತೇನೆ. ಸಂವಿಧಾನ, ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇರುವ ಯಾವ ಸರ್ಕಾರವೂ ಈ ರೀತಿ ಮಾಡುವುದಿಲ್ಲ. ಜನರ ಧ್ವನಿಯನ್ನು ಹತ್ತಿಕ್ಕುವುದು ಸರ್ವಾಧಿಕಾರಿ ಧೋರಣೆಯಾಗುತ್ತದೆ. ಸರ್ಕಾರ ತನ್ನ ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸುತ್ತೇನೆ ಎಂದಿದ್ದಾರೆ.