ಬೆಂಗಳೂರು : ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಬಾರಿ 9ನೇ ತರಗತಿಯ ಪರೀಕ್ಷೆಯೂ ನಡೆದಿಲ್ಲ. ಅದರ ಆಧಾರದ ಮೇಲೆ ಅಂಕಗಳನ್ನು ನೀಡಲು ಸಾಧ್ಯವಾಗದ ಕಾರಣ, ಎಸ್ ಎಸ್ ಎಲ್ ಸಿ ಗೆ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದ್ದು, ರಾಜ್ಯದಲ್ಲಿ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ ವಿಭಿನ್ನ ಮಾದರಿಯಲ್ಲಿ ನಡೆಯಲಿದೆ ಎಂದರು.
ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ಈ ಮೂರು ವಿಷಯಗಳನ್ನು ಸೇರಿಸಿ ಒಂದು ಪೇಪರ್ ನೀಡಲಾಗುತ್ತದೆ, ಬಹು ಆಯ್ಕೆ ಪ್ರಶ್ನೆಗಳನ್ನು ಕೇಳಲಾಗುವುದು. ಪ್ರಶ್ನೆಗಳು ಸರಳ ಹಾಗೂ ನೇರವಾಗಿರಲಿದ್ದು, ವಿದ್ಯಾರ್ಥಿಗಳು ಆತಂಕಪಡುವ ಆಗತ್ಯವಿಲ್ಲ. ಇದೇ ರೀತಿ ಪ್ರಥಮ ಭಾಷೆ, ದ್ವಿತೀಯ ಹಾಗೂ ತೃತೀಯ ಭಾಷೆಗೆ ಮತ್ತೊಂದು ಪರೀಕ್ಷೆ ಇರಲಿದೆ. ಪ್ರತಿ ವಿಷಯಕ್ಕೆ 40 ಅಂಕಗಳಿರುತ್ತವೆ. ಅಂದರೆ, ಒಂದು ಪತ್ರಿಕೆ 120 ಅಂಕಗಳಿಗೆ ಇದ್ದು ಮೂರು ಗಂಟೆ ಸಮಯ ನಿಡಲಾಗುತ್ತದೆ’ ಎಂದರು.
ವಿದ್ಯಾರ್ಥಿಗಳು ಪಿಯುಸಿಯಲ್ಲಿ ವಿಜ್ಞಾನ, ವಾಣಿಜ್ಯ ಕಲಾ ವಿಭಾಗ ಸೇರಿದಂತೆ ಯಾವುದೇ ಕೋರ್ಸ್ ತೆಗೆದುಕೊಳ್ಳಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಪರೀಕ್ಷೆ ನಡೆಸಲಾಗುತ್ತಿದೆ. ಈ ಪರೀಕ್ಷೆಯಲ್ಲಿ ಯಾರನ್ನು ಫೇಲ್ ಮಾಡುವುದಿಲ್ಲ. ಗ್ರೇಡ್ ಮಾದರಿಯಲ್ಲಿ ಪರೀಕ್ಷೆ ನಡೆಯುತ್ತದೆ. ಜುಲೈ 3 ನೇ ವಾರದಲ್ಲಿ ಪರೀಕ್ಷೆ ನಡೆಸಲು ಚಿಂತನೆ ನಡೆಸಲಾಗಿದೆ. ಪರೀಕ್ಷೆಗೆ 20 ದಿನ ಇರುವಾಗಲೇ ವೇಳಾಪಟ್ಟಿ ಪ್ರಕಟ ಮಾಡಲಾಗುವುದು ಎಂದು ಹೇಳಿದ್ದಾರೆ.
ಇನ್ನೂ ಕೋವಿಡ್ ಕಾರಣದಿಂದ ಪರೀಕ್ಷೆ ಬರೆಯದೇ ಹೋದರೆ ಅಂತಹ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ನೀಡಲಾಗುವುದು ಎಂದು ತಿಳಿಸಿದರು.










