ರಾಜ್ಯದಲ್ಲಿ ಮಾಸ್ಕ್ ಕಡ್ಡಾಯ ; ಕೋವಿಡ್ ಪರಿಶೀಲನಾ ಸಭೆಯಲ್ಲಿ ನಿರ್ಧಾರ…

58
firstsuddi

ಬೆಂಗಳೂರು : ಕೋವಿಡ್ ನಾಲ್ಕನೇ ಅಲೆ ಆತಂಕ ಹಿನ್ನೆಲೆಯಲ್ಲಿ ಮಾಸ್ಕ್ ಕಡ್ಡಾಯ, ಸಾಮಾಜಿಕ ಅಂತರ ಪಾಲನೆ ಕಟ್ಟುನಿಟ್ಟಾಗಿ ಪಾಲಿಸಲು ಕ್ರಮ ಕೈಗೊಳ್ಳಲು ನಿರ್ಧರಿಸಿದ್ದೇವೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕೋವಿಡ್ ಪರಿಶೀಲನಾ ಸಭೆ ನಡೆಯಿತು. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಆರೋಗ್ಯ ಸಚಿವ ಸುಧಾಕರ್, ಕೋವಿಡ್ ನಾಲ್ಕನೇ ಅಲೆ ಬರಬಹುದೆಂಬ ಸಾಧ್ಯತೆ ಹಿನ್ನೆಲೆಯನ್ನು ಸಿಎಂ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ್ದೇವೆ. ರಾಜ್ಯಾದ್ಯಂತ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸದ್ಯ ಮಾಸ್ಕ್ ಧರಿಸದಿದ್ದರೆ ದಂಡ ವಿಧಿಸುವ ಬಗ್ಗೆ ಚಿಂತನೆ ನಡೆಸಿಲ್ಲ. ಈ ಸಂಬಂಧ ಮಾರ್ಗಸೂಚಿ ಹೊರಡಿಸುತ್ತೇವೆ ಎಂದು ತಿಳಿಸಿದರು.

ದೆಹಲಿ, ಮಹಾರಾಷ್ಟ್ರ, ಕೇರಳ, ತಮಿಳುನಾಡುಗಳಿಂದ ಬರುವವರ ವಿಚಾರದ ಬಗ್ಗೆ ಏಪ್ರಿಲ್ 27 ರ ಬಳಿಕ ಸಭೆ ನಡೆಸಲಾಗುತ್ತದೆ. ಪ್ರಧಾನಿ ಸಭೆ ಬಳಿಕ ಮತ್ತೊಂದು ಸಭೆ ಸೇರುತ್ತೇವೆ. ಪ್ರಧಾನಿಯವರು ನೀಡುವ ನಿರ್ದೇಶನಗಳನ್ನು ನೋಡಿಕೊಂಡು ಮುಂದುವರೆಯುತ್ತೇವೆ. ಆ ರಾಜ್ಯಗಳಿಂದ ಬರುವವರ ಮೇಲೆ ಯಾವ ರೀತಿ ನಿಗಾ ಇಡಬೇಕೆಂದು ಆ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.

ಶೇ.1.9ರಷ್ಟು ಪ್ರಮಾಣದಲ್ಲಿ ಪಾಸಿಟಿವಿಟಿ ದರ ಬೆಂಗಳೂರಿನಲ್ಲಿ ದಾಖಲಾಗಿದೆ. ಹಾಗಾಗಿ ಲಸಿಕೆ, ಬೂಸ್ಟರ್ ಲಸಿಕೆ ಹಾಕಿಸಿಕೊಳ್ಳಲು ಜನತೆಗೆ ಮನವಿ ಮಾಡುತ್ತಿದ್ದೇವೆ, ನಾಲ್ಕನೇ ಅಲೆವರೆಗೆ ಕಾಯದೆ ಲಸಿಕೆ ಹಾಕಿಸಿಕೊಳ್ಳಿ ಎಂದು ಕರೆ ನೀಡಿದರು.