ರಾಜ್ಯದಲ್ಲಿ ಹಿಜಾಬ್ ನಿಷೇಧ ವಾಪಸ್: ಸಿದ್ದರಾಮಯ್ಯ ಹೇಳಿಕೆ …

54
firstsuddi

ಬೆಂಗಳೂರು: ರಾಜ್ಯದಲ್ಲಿ ಹಿಜಾಬ್ ನಿಷೇಧ ವಾಪಸ್ ಪಡೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಹಿಜಬ್ ನಿಷೇಧಿಸಿತ್ತು. ಅದನ್ನು ವಾಪಸ್ ಪಡೆಯಲಾಗುವುದು. ಉಡುಪು ಅವರವರ ಇಷ್ಟ. ಹಿಜಬ್ ನಿಷೇಧ ವಾಪಸ್‌ಗೆ ಹೇಳಿದ್ದೀನಿ. ಪ್ರಧಾನಿ ಮೋದಿ ಅವರ ಸಬ್ ಕಾ ಸಾಥ್-ಸಬ್ ಕಾ ವಿಕಾಸ್ ಎನ್ನುವುದು ಬೋಗಸ್. ಬಟ್ಟೆ, ಉಡುಪು, ಜಾತಿ ಆಧಾರದ ಮೇಲೆ ಜನರನ್ನು ವಿಭಜಿಸುವ, ಸಮಾಜವನ್ನು ವಿಭಜಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ನಾವು ಅಂತಹ ಕೆಲಸ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಹಿಜಬ್ ನಿಷೇಧದ ಆದೇಶ ವಾಪಸ್ ಪಡೆಯುತ್ತೇವೆ. ಹಿಜಬ್ ಧರಿಸಿ ಶಾಲಾ-ಕಾಲೇಜುಗಳಿಗೆ, ಪರೀಕ್ಷೆ ಬರೆಯಲು ಹೋಗಬಹುದು ಎಂದು ತಿಳಿಸಿದರು.

ಡ್ರೆಸ್, ಊಟ ಮಾಡುವುದು ನಿಮಗೆ ಸೇರಿದ್ದು. ನಾನೇಕೆ ನಿಮಗೆ ಅಡ್ಡಿಪಡಿಸಲಿ? ನೀನು ಯಾವ್ ಡ್ರೆಸ್ ಹಾಕಿಕೊಳ್ಳುತ್ತೀಯಾ ಹಾಕಿಕೋ. ನೀನು ಯಾವ ಊಟ ಮಾಡುತ್ತೀಯಾ ಮಾಡು. ನೀನು ಊಟ ಮಾಡುವುದು ನಿನ್ನ ಹಕ್ಕು. ನಾನು ಊಟ ಮಾಡುವುದು ನನ್ನ ಹಕ್ಕು ಎಂದು ಹೇಳಿದರು.

ನಾನು ದೋತಿ ಮತ್ತು ಜುಬ್ಬ ಹಾಕಿಕೊಳ್ಳುತ್ತೇನೆ. ನೀನು ಪ್ಯಾಂಟ್-ಶರ್ಟ್ ಹಾಕಿಕೊಂಡರೆ ಹಾಕಿಕೋ, ಇದರಲ್ಲಿ ತಪ್ಪೇನಿದೆ? ಮತಕ್ಕಾಗಿ ರಾಜಕಾರಣ ಮಾಡುವುದು ತಪ್ಪು. ಬಡವರಿಗಾಗಿ ನಮ್ಮ ಸರ್ಕಾರ ಕೆಲಸ ಮಾಡುತ್ತೆ. ಇದರಿಂದ ವಿಚಲಿತರಾಗುವ ಪ್ರಶ್ನೆ ಇಲ್ಲ. ರಾಜೀ ಮಾಡಿಕೊಳ್ಳುವ ಪ್ರಶ್ನೆ ಇಲ್ಲ. ಸುಳ್ಳು, ಮೋಸ ಮಾಡುವವರ ಜೊತೆ ಇರಬೇಡಿ ಎಂದು ಜನರಿಗೆ ಸಲಹೆ ನೀಡಿದರು.

ಕರ್ನಾಟಕದಲ್ಲಿ ಹಿಜಾಬ್ ನಿಷೇಧ ವಾಪಸ್ ಪಡೆಯುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ ಬೆನ್ನಲ್ಲೇ ರಾಜ್ಯ ಬಿಜೆಪಿ ಆಕ್ರೋಶ ಹೊರಹಾಕಿದೆ. ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಅವರ ಗ್ಯಾರಂಟಿ ಎಂದು ಬಿಜೆಪಿ ಕಿಡಿಕಾರಿದೆ.

ಹಿಜಾಬ್ ನಿಷೇಧವನ್ನು ವಾಪಾಸ್ ಪಡೆಯಲು ತಿಳಿಸಿದ್ದೇನೆ ಎಂದು ಸಿದ್ದರಾಮಯ್ಯನವರ ಎಕ್ಸ್ ಖಾತೆಗೆ ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ, ಶಾಲೆ – ಕಾಲೇಜುಗಳಲ್ಲಿ ಮಕ್ಕಳು ಸಮಾನತೆಯಿಂದ ಕೂಡಿರಬೇಕು ಎಂದೇ ಸಮವಸ್ತ್ರ ನೀತಿಯನ್ನು ಜಾರಿಗೊಳಿಸಲಾಗಿದೆ. ಇದನ್ನು ಸುಪ್ರೀಂ ಕೋರ್ಟ್ ಸಹ ಎತ್ತಿ ಹಿಡಿದಿದೆ. ಆದರೆ, ಶಾಲಾ ವಿದ್ಯಾರ್ಥಿಗಳ ಮನಸ್ಸಲ್ಲಿ ಸಮವಸ್ತ್ರ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರು ಭೇದವನ್ನು ಹುಟ್ಟು ಹಾಕುತ್ತಿದ್ದಾರೆ ಎಂದು ಆರೋಪಿಸಿದೆ.

ಪಿಎಫ್ಐ ಗೂಂಡಾಗಳು, ಅಲ್ಪಸಂಖ್ಯಾತರನ್ನು ಓಲೈಕೆ ಮಾಡಲು ವೋಟ್ ಬ್ಯಾಂಕ್‌ಗಾಗಿ ಸಿದ್ದರಾಮಯ್ಯ ಅವರು ಸಂವಿಧಾನವನ್ನೇ ತಿದ್ದುಪಡಿ ಮಾಡಲು ಹೊರಟಿದ್ದಾರೆ. ಮುಂದಿನ ದಿನಗಳಲ್ಲಿ ಇದಕ್ಕೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದೆ.