ಬೆಂಗಳೂರು : ರಾಜ್ಯಾದ್ಯಂತ ಮಹಾಮಾರಿ ಕೊರೊನಾ ವೈರಸ್ ಲಾಕ್‍ಡೌನ್‍ನಿಂದಾಗಿ ಮುಂದೂಡಲ್ಪಟ್ಟಿದ್ದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಇಂದಿನಿಂದ ಆರಂಭವಾಗುತ್ತಿದ್ದು, ಪರೀಕ್ಷೆ ನಡೆಸಲು ಸರ್ಕಾರ ಎಲ್ಲಾ ರೀತಿಯ ಸೂಕ್ತ ಕ್ರಮಗಳನ್ನು ಕೈಗೊಂಡಿದೆ. ರಾಜ್ಯಾದ್ಯಂತ 2,879 ಪರೀಕ್ಷಾ ಕೇಂದ್ರಗಳಿದ್ದು, 8,48,203 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಅವರಲ್ಲಿ 4,48,560 ಮಂದಿ ಬಾಲಕರು ಹಾಗೂ 3,99,643 ಮಂದಿ ಬಾಲಕಿಯರು ಪರೀಕ್ಷೆ ಬರೆಯಲು ಸಿದ್ಧರಾಗಿದ್ದಾರೆ. ಪರೀಕ್ಷೆ ಕೇಂದ್ರಗಳು ಕೇವಲ ಪರೀಕ್ಷೆ ಕೇಂದ್ರಗಳಲ್ಲಾ, ಸುರಕ್ಷಾ ಕೇಂದ್ರಗಳಾಗಿವೆ. ಯಾರೂ ಆತಂಕಕ್ಕೆ ಒಳಗಾಗಬಾರದು. ಪೋಷಕರು ಧೈರ್ಯದಿಂದ ಮಕ್ಕಳನ್ನು ಪರೀಕ್ಷೆಗೆ ಕಳುಹಿಸಬೇಕು ಎಂದು ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಅವರು ಮನವಿ ಮಾಡಿಕೊಂಡಿದ್ದಾರೆ.










