ಮಂಡ್ಯ : ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ರಂಗನತಿಟ್ಟು ಪಕ್ಷಿಧಾಮದ ಬಳಿಯ ರಸ್ತೆಯಲ್ಲಿ ರಾತ್ರಿ ವೇಳೆ ಭಾರೀ ಗಾತ್ರದ ಮೊಸಳೆಯೊಂದು ಸಂಚರಿಸಿದ್ದು, ಜನರಲ್ಲಿ ಭೀತಿ ಉಂಟಾಗಿದೆ.
ಪ್ರವಾಸಿಗರೊಬ್ಬರು ಕಾರಿನಲ್ಲಿ ರಾತ್ರಿ ಬರುವಾಗ ರಸ್ತೆಯಲ್ಲಿ ಮೊಸಳೆ ಸಂಚರಿಸಿರುವುದನ್ನು ಕಂಡಿದ್ದಾರೆ. ಈ ವೇಳೆ ಮೊಸಳೆಯ ಓಡಾಟದ ವೀಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದೀಗ ಈ ವೀಡಿಯೋ ವೈರಲ್ ಆಗ್ತಿದ್ದು, ಭಯಭೀತರಾದ ಆ ಭಾಗದಲ್ಲಿರುವ ರೈತರು ತಮ್ಮ ಜಮೀನಿಗೆ ರಾತ್ರಿ ವೇಳೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.
ಕಳೆದ ಒಂದು ತಿಂಗಳಿನಿಂದ ರಂಗನತಿಟ್ಟು ಪಕ್ಷಿಧಾಮದ ಬಳಿಯ ವಿರಿಜಾ ನಾಲೆಯಲ್ಲಿ ಮೊಸಳೆಯೊಂದು ಸೇರಿಕೊಂಡಿದ್ದು, ನಾಲೆಯಿಂದ ಮೇಲೆ ಬಂದು ಮೂರ್ನಾಲ್ಕು ಕುರಿ ಮೇಕೆಗಳನ್ನು ಕೊಂದು ಹಾಕಿತ್ತು. ಇದೀಗ ಮತ್ತೆ ಆಹಾರಕ್ಕಾಗಿ ರಾತ್ರಿ ವೇಳೆ ಸಂಚರಿಸುತ್ತಿದೆ. ಮೊಸಳೆಯನ್ನು ಸೆರೆಹಿಡಿಯಲು ಅರಣ್ಯಾಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.










