ಚಿಕ್ಕಮಗಳೂರು : ನಗರದ ಶ್ರೀ ಗಾಯತ್ರಿದೇವಿ ಕಲ್ಯಾಣ ಮಂಟಪದಲ್ಲಿ ಹವ್ಯಕ ಬಳಗ ವಾರ್ಷಿಕ ಸ್ನೇಹ ಸಮ್ಮಿಲನದ ಪ್ರಯುಕ್ತ ನಿನ್ನೆ ಆಯೋಜಿಸಿದ್ದ ಅಂಗದ ಸಂಧಾನ ಯಕ್ಷಗಾನ ತಾಳಮದ್ದಲೆ ರಾಮಾಯಣದ ಅಂತರಾರ್ಥವನ್ನು ಅನಾವರಣಗೊಳಿಸಿತು.
ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರನ ಆಂತರ್ಯ, ನಡೆ, ನುಡಿ, ನಿರ್ಣಯ, ಕರುಣೆ, ಪ್ರೀತಿ, ವಿಮರ್ಶೆ, ಗುಣ ಮತ್ತು ಆದರ್ಶಗಳನ್ನು ಎಳೆಎಳೆಯಾಗಿ ಸಭಿಕರೆದುರು ಕಲಾವಿದರು ತೆರೆದಿಟ್ಟರು.
ವಿನಾಯಕ ಮತ್ತು ಶಾರದಾ ಸ್ತುತಿಯೊಂದಿಗೆ ಆರಂಭಗೊಂಡ ಪ್ರಸಂಗದಲ್ಲಿ ಭಾಗವತರ ಕಂಚಿನ ಕಂಠದ ಗಾಯನ, ಕಲಾವಿದರ ಚುರುಕು ಸಂಭಾಷಣೆ, ಪ್ರಾಸಬದ್ದ ಮಾತು, ನವಿರು ಹಾಸ್ಯ, ಮಾತಿನ ಚಾತುರ್ಯ ಸಭಿಕರನ್ನು ಮೂರು ಗಂಟೆಗೂ ಅಧಿಕ ಕಾಲ ಹಿಡಿದಿಟ್ಟಿತು.
ರಾಮಾಯಣದ ವಿವಿಧ ಘಟನೆಗಳನ್ನು, ವಿವಿಧ ಮಜಲುಗಳನ್ನು ಅಯಾಮಗಳನ್ನು ಅವುಗಳ ಹಿಂದಿರುವ ನೀತಿ, ಧರ್ಮ, ಲೋಕ ಹಿತದ ದೃಷ್ಠಿ, ಆ ಕಾಲದ ಉನ್ನತ ಮೌಲ್ಯಗಳ ಪ್ರತಿಪಾದನೆ ಸಭಿಕರು ತಲೆದೂಗುವಂತೆ ಮಾಡಿತು.
ಭಾಗವತರಾಗಿ ಮೂಡುಬೆಳ್ಳೆ ಚಂದ್ರಕಾಂತ, ಮೃದಂಗದಲ್ಲಿ ಮೂರೂರು ಸುಬ್ರಹ್ಮಣ್ಯ ಹೆಗಡೆ, ಚಂಡೆಯಲ್ಲಿ ಕೋಣಾರೆ ಗಜಾನನ ಹೆಗಡೆ, ಮುಮ್ಮೇಳದಲ್ಲಿ ಪ್ರಹಸ್ತನಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್, ಅಂಗದನಾಗಿ ಮೂರೂರು ವಾಸುದೇವ ರಂಗಾಭಟ್, ರಾವಣನಾಗಿ ಕನ್ನಡಿಕಟ್ಟೆ ಗಣೇಶಶೆಟ್ಟಿ, ಹನುಮಂತನ ಪಾತ್ರದಲ್ಲಿ ವಿನೋದ್ ಭಟ್ ಗಮನ ಸೆಳೆದರು.
ಇದೇ ವೇಳೆ ವೇದಬ್ರಹ್ಮ ಅಶೋಕ್ ಶರ್ಮ, ಮೂಳೆತಜ್ಞ ಡಾ|| ಎಲ್.ವಿ.ಚಂದ್ರಕಾಂತ್, ಪರಶುರಾಮ ಜೋಷಿ ಅವರನ್ನು ಹವ್ಯಕ ಬಳಗದಿಂದ ಸನ್ಮಾನಿಸಲಾಯಿತು.
ಹವ್ಯಕ ಬಳಗದ ಅಧ್ಯಕ್ಷ ರಾಮ ಜಿ.ಹಾಸ್ಯಗಾರ, ಉಪಾಧ್ಯಕ್ಷ, ಗಜಾನನ ವಿಷ್ಣು ಹೆಗಡೆ, ಕಾರ್ಯದರ್ಶಿ ಶಂಕರನಾರಾಯಣ ಭಟ್, ಖಜಾಂಚಿ ಮಂಜುನಾಥ ಭಟ್, ರಾಜಾರಾಮ್ ಕೋಟೆ ಉಪಸ್ಥಿತರಿದ್ದರು.










