ರಾಷ್ಟ್ರಪತಿ ಚುನಾವಣೆ : ನಾಮಪತ್ರ ಸಲ್ಲಿಸಿದ 11 ಅಭ್ಯರ್ಥಿಗಳು.

82
firstsuddi

ನವದೆಹಲಿ : ಜುಲೈ 18ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಮೊದಲ ದಿನವಾದ ಇಂದು 11 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಅವರಲ್ಲಿ ದಾಖಲೆಗಳ ಕೊರತೆಯಿಂದಾಗಿ ಓರ್ವ ಅಭ್ಯರ್ಥಿಯ ನಾಮಪತ್ರವನ್ನು ತಿರಸ್ಕರಿಸಲಾಗಿದೆ.

ತಮಿಳುನಾಡಿನ ಕೆ.ಪದ್ಮರಾಜನ್, ಎ.ಮಣಿಥನ್, ದೆಹಲಿಯಿಂದ ಜೀವನ್ ಕುಮಾರ್ ಮಿತ್ತಲ್, ದಯಾ ಶಂಕರ್ ಅಗರ್ವಾಲ್, ಓಂಪ್ರಕಾಶ್ ಖರಬಂದ, ಮಹಾರಾಷ್ಟ್ರದ ಮೊಹಮ್ಮದ್ ಎ.ಹಮಿದ್ ಪಟೇಲ್, ನಾಮಕ್ಕಲ್ ನಿಂದ ಟಿ. ರಮೇಶ್, ಬಿಹಾರದಿಂದ ಶ್ಯಾಮ್ ನಂದನ್ ಪ್ರಸಾದ್, ಲಾಲೂ ಪ್ರಸಾದ್ ಯಾದವ್ ಹಾಗೂ ಆಂಧ್ರಪ್ರದೇಶದಿಂದ ಮಂದತಿ ತಿರುಪತಿ ರೆಡ್ಡಿ ನಾಮಪತ್ರ ಸಲ್ಲಿಸಿದ್ದಾರೆ.

ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅವಧಿ ಜುಲೈ 24ರಂದು ಮುಕ್ತಾಯವಾಗಲಿದ್ದು, ಆ ಸ್ಥಾನಕ್ಕೆ ಚುನಾವಣೆಗಾಗಿ ಚುನಾವಣಾ ಅಧಿಸೂಚನೆ ಹೊರಡಿಸಲಾಗಿದೆ. ನಾಮನಿರ್ದೇಶನ ಪ್ರಕ್ರಿಯೆಯೂ ಪ್ರಾರಂಭವಾಗಿದ್ದು, ಜುಲೈ 18 ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಜೂನ್ 29ರ ವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ಚುನಾವಣೆಯ ಭದ್ರತಾ ಠೇವಣಿ 15 ಸಾವಿರ ರೂ. ಇದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ನಿನ್ನೆ ದೆಹಲಿಯಲ್ಲಿ ಮುಂಬರುವ ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿ ಆಯ್ಕೆಗಾಗಿ ವಿರೋಧ ಪಕ್ಷಗಳ ಸಭೆ ಕರೆದಿದ್ದರು. ಈ ಸಭೆಯಲ್ಲಿ ಸುಮಾರು 18 ರಾಜಕೀಯ ಪಕ್ಷದ ನಾಯಕರು ಪಾಲ್ಗೊಂಡಿದ್ದರು. ರಾಷ್ಟ್ರಪತಿ ಚುನಾವಣೆಗೆ ಎನ್ ಸಿಪಿ ನಾಯಕ ಶರದ್ ಪವಾರ್ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಉದ್ದೇಶಿಸಲಾಗಿತ್ತು. ಆದರೆ ಹಲವು ಪಕ್ಷಗಳ ಮನವಿಯನ್ನು ಶರದ್ ಪವಾರ್ ತಿರಸ್ಕರಿಸಿದ್ದು, ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.