ಪಾಟ್ನಾ: ಸೇನಾಪಡೆಗಳಲ್ಲಿನ ನೇಮಕಾತಿಗಾಗಿ ಕೇಂದ್ರ ಸರ್ಕಾರ ಘೋಷಿಸಿರುವ ಅಗ್ನಿಪಥ್ ಯೋಜನೆ ವಿರೋಧಿಸಿ ನಿನ್ನೆಯಿಂದ ನಡೆಯುತ್ತಿರುವ ಪ್ರತಿಭಟನೆ ಇಂದು ಕೂಡ ಮುಂದುವರಿದಿದ್ದು, ಹಿಂಸಾಚಾರಕ್ಕೆ ತಿರುಗಿದೆ. ಬಿಹಾರದ ಹಲವು ಭಾಗಗಳಲ್ಲಿ ಸತತ ಎರಡನೇ ದಿನ ರೈಲು ಮತ್ತು ವಾಹನ ಸಂಚಾರಕ್ಕೆ ಸೇನಾ ಆಕಾಂಕ್ಷಿಗಳು ಅಡ್ಡಿಪಡಿಸಿದರು.
ಜಹಾನಾಬಾದ್, ಛಾಪ್ರಾ ಮತ್ತು ನವಾಡ ಸೇರಿದಂತೆ ಬಿಹಾರದ ಹಲವಾರು ಪ್ರದೇಶಗಳಲ್ಲಿ ಯೋಜನೆಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಹಿಂಸಾತ್ಮಕ ಪ್ರತಿಭಟನೆಗಳನ್ನು ಕಂಡು ಬಂದಿವೆ. ನಾವಡಾದಲ್ಲಿ ಯುವಕರ ಗುಂಪೊಂದು ರಸ್ತೆ ಮಧ್ಯೆ ಟೈರ್ ಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದೆ. ಅಗ್ನಿಪಥ್ ಯೋಜನೆ ಕೈಬಿಡುವಂತೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಸಹರ್ಸಾದಲ್ಲಿ ಕೂಡ ರೈಲು ನಿಲ್ದಾಣದಲ್ಲಿ ಪ್ರತಿಭಟನೆ ನಡೆದಿದ್ದು, ಅವರನ್ನು ನಿಯಂತ್ರಿಸಲು ತೆರಳಿದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿದೆ.
ಭಭುವಾ ರೋಡ್ ರೈಲ್ವೆ ನಿಲ್ದಾಣಕ್ಕೆ ನುಗ್ಗಿದ ಪ್ರತಿಭಟನಾಕಾರರು ಇಂಟರ್ಸಿಟಿ ಎಕ್ಸ್ ಪ್ರೆಸ್ ರೈಲಿನ ಗಾಜಿನ ಕಿಟಕಿಗಳನ್ನು ಲಾಠಿಗಳಿಂದ ಒಡೆದು ಹಾಕಿದರು. ಅಲ್ಲದೆ, ಒಂದು ಕೋಚ್ ಗೆ ಬೆಂಕಿ ಕೂಡ ಹಾಕಿದರು. ಜಹಾನಾಬಾದ್ ರೈಲು ನಿಲ್ದಾಣದಲ್ಲಿ ಸಾವಿರಾರು ಯುವಕರು ಜಮಾಯಿಸಿ ಹಳಿ ತಡೆದು ಪ್ರತಿಭಟನೆ ನಡೆಸಿದರು. ಯೋಜನೆಯನ್ನು ಹಿಂತೆಗೆದುಕೊಳ್ಳಲು ಮತ್ತು ಸಾಮಾನ್ಯ ಪ್ರಕ್ರಿಯೆಯಲ್ಲಿ ನೇಮಕಾತಿಗೆ ಒತ್ತಾಯಿಸಿ, ಪ್ರತಿಭಟನಾಕಾರರು ಪಾಟ್ನಾ-ಗಯಾ ರಸ್ತೆ ಮಾರ್ಗ ಮತ್ತು ಪಾಟ್ನಾ-ಗಯಾ ಪ್ಯಾಸೆಂಜರ್ ರೈಲನ್ನು ತಡೆದು ತಮ್ಮ ಆಕ್ರೋಶ ಹೊರ ಹಾಕಿದರು.
ರೈಲ್ವೆ ಅಧಿಕಾರಿಗಳು ಜಿಲ್ಲಾ ಪೊಲೀಸರೊಂದಿಗೆ ಪ್ರತಿಭಟನಾಕಾರರನ್ನು ಮನವೋಲಿಸಲು ಪ್ರಯತ್ನಿಸಿದರು. ಸುಗಮ ಸಂಚಾರಕ್ಕೆ ಮತ್ತು ರೈಲ್ವೆ ಹಳಿಯಿಂದ ವಾಪಸ್ ಬರಲು ವಿನಂತಿಸಿದರು. ಆದರೂ ಯಾವುದೇ ಪ್ರಯೋಜನವಾಗಲಿಲ್ಲ. ಪಾಟ್ನಾ-ಗಯಾ ಮುಖ್ಯ ರಸ್ತೆಯ ಕಾಕೋ ಮೋರ್ನಲ್ಲಿ ಪ್ರತಿಭಟನಾಕಾರರು ಜಮಾಯಿಸಿ ಟೈರ್ ಗಳನ್ನು ಸುಟ್ಟು ಹಾಕಿದರು.










