ಗುಬ್ಬಿಯಲ್ಲಿ ಡಿಎಸ್ಎಸ್ ಮುಖಂಡನ ಹತ್ಯೆ – ಆರೋಪಿಗಳನ್ನು ಬಂಧಿಸುವಂತೆ ಬಿಎಸ್‍ಪಿ ಒತ್ತಾಯ…

81
firstsuddi

ಚಿಕ್ಕಮಗಳೂರು : ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ದಲಿತ ಸಂಘರ್ಷ ಸಮಿತಿಯ ಮುಖಂಡನ ಹತ್ಯೆ ಮಾಡಿರುವ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಬಹುಜನ ಸಮಾಜ ಪಕ್ಷ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದೆ.

ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರನ್ನು ಈ ಸಂಬಂಧ ಇಂದು ಭೇಟಿ ಮಾಡಿ ಮನವಿ ಸಲ್ಲಿಸಿದ ಪಕ್ಷದ ಪದಾಧಿಕಾರಿಗಳು ಹತ್ಯೆ ಘಟನೆಯನ್ನು ತೀವ್ರವಾಗಿ ಖಂಡಿಸಿದರು.

ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ದಲಿತ ಸಂಘರ್ಷ ಸಮಿತಿಯ ಮುಖಂಡ ನರಸಿಂಹಮೂರ್ತಿ ಅವರನ್ನು ನಿನ್ನೆ ಹಾಡುಹಗಲೇ ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಪೋಲೀಸರು ಹತ್ಯೆಯ ಹಿಂದಿನ ಕಾರಣವನ್ನು ಬಹಿರಂಗಪಡಿಸಬೇಕು, ಕೊಲೆ ಆರೋಪಿಗಳಿಗೆ ಉಗ್ರ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.

ಹತ್ಯೆಯ ಹಿಂದೆ ಯಾವುದೇ ಶಕ್ತಿ ಇದ್ದರೂ ಅದರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಬೇಕು, ಕೊಲೆಗೀಡಾದ ನರಸಿಂಹಮೂರ್ತಿಯವರ ಕುಟುಂಬಕ್ಕೆ ಭದ್ರತೆ ಒದಗಿಸುವುದರ ಜೊತೆಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ತಾಲ್ಲೂಕು ಅಧ್ಯಕ್ಷ ಹರೀಶ್ ಮಿತ್ರ, ಜಿಲ್ಲಾ ಸಹೋದರತ್ವ ಸಮಿತಿಯ ಅಧ್ಯಕ್ಷೆ ಕೆ.ಬಿ.ಸುಧಾ, ಉಪಾಧ್ಯಕ್ಷೆ ಕೆ.ಎಸ್.ಮಂಜುಳಾ, ಶೋಭಾ, ಪಕ್ಷದ ಮುಖಂಡರಾದ ನವೀನ್, ವಸಂತ, ಕನ್ನಡ ಸೇನೆಯ ವಿಜಯಪ್ರಕಾಶ್, ಜಗದೀಶ್ ಹಾಜರಿದ್ದರು.